ಹಬ್ಬ ಆಚರಿಸಲು ಊರಿಗೆ ಬಂದಿದ್ದ ಉಗ್ರ ಎನ್‌ಐಎ ಬಲೆಗೆ

ಕಾರವಾರ: ಬಕ್ರೀದ್‌ ಹಬ್ಬ ಆಚರಿಸಲು ವಿದೇಶದಿಂದ ಊರಿಗೆ ಬಂದಿದ್ದ ಉಗ್ರನೊಬ್ಬನನ್ನು ಎನ್‌ಐಎ ಅಧಿಕಾರಿಗಳು ಉತ್ತರ ಕನ್ನಡದ ಬನವಾಸಿ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಬಂಧಿಸಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟ, ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಮತ್ತು ಶಿವಮೊಗ್ಗ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರರಿಗೆ ಪ್ರಚೋದನೆ ನೀಡಿದ ಆರೋಪ ಈತನ ಮೇಲಿದೆ.
ಶಿರಸಿ ಮತ್ತು ಬನವಾಸಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಅಬ್ದುಲ್ ಶಕೂರ್ (34) ಎಂಬಾತನನ್ನು ಬಂಧಿಸಿದ್ದಾರೆ.

ಶಕೂರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನಾಗಿದ್ದ. ಬಕ್ರೀದ್ ಆಚರಣೆಗಾಗಿ ಈತ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ರಾಷ್ಟ್ರೀಯ ತನಿಖಾ ಸಂಸ್ಥೆ ಆತನನ್ನು ಬಂಧಿಸಿದೆ.
ಶಕೂರ್ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆನ್‌ಲೈನ್‌ನಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಎಂದು ಮೂಲಗಳು ತಿಳಿಸಿವೆ. ಸುಳ್ಳು ದಾಖಲೆಗಳನ್ನು ಒದಗಿಸಿ ಈತ ಪಾಸ್‌ಪೋರ್ಟ್ ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಮೌಲ್ವಿಯಾಗಿದ್ದ ಶಕೂರ್ 2018-19ರಲ್ಲಿ ತೀರ್ಥಳ್ಳಿಗೆ ಭೇಟಿ ನೀಡಿದ್ದು, ಆಗ ಮಂಗಳೂರು ಕುಕ್ಕರ್, ರಾಮೇಶ್ವರಂ ಕೆಫೆ ಮತ್ತು ಶಿವಮೊಗ್ಗ ಮಸೀದಿ ಸ್ಫೋಟದ ಪ್ರಮುಖ ಆರೋಪಿಯನ್ನು ಭೇಟಿಯಾಗಿದ್ದ. ಈತ ದುಬೈನಲ್ಲಿ ಅಡುಗೆ ವಸ್ತುಗಳು, ಹವಾನಿಯಂತ್ರಣಗಳು ಮತ್ತು ಲೋಹಗಳ ವ್ಯವಹಾರ ನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತನನ್ನು ಬಂಧನಕ್ಕೊಳಪಡಿಸಿರುವ ಎನ್ಐಎ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

















































error: Content is protected !!
Scroll to Top