ಡಾ. ನಾ. ಮೊಗಸಾಲೆಗೆ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ

ಕಾರ್ಕಳ : ತನ್ನ 18ನೇ ವಯಸ್ಸಿನಲ್ಲಿಯೇ ‘ನನ್ನದಲ್ಲದ್ದು’ ಎಂಬ ಕಾದಂಬರಿ ರಚನೆಯೊಂದಿಗೆ ಕಾದಂಬರಿ ಲೋಕಕ್ಕೆ ಮುಂದಡಿಯಿಟ್ಟ ಡಾ. ನಾ. ಮೊಗಸಾಲೆಯವರು ಈಗಾಗಲೇ ತಮ್ಮ 22 ಕಾದಂಬರಿಗಳನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೊಗಸಾಲೆ ನಾಡಿನ ಪ್ರಮುಖ ಸೃಜನಶೀಲ ಸಾಹಿತಿಗಳಲ್ಲಿ ಒಬ್ಬರು ಎಂದು ಖ್ಯಾತ ಇತಿಹಾಸ ತಜ್ಞ ಡಾ. ಪುಂಡಿಕೈ ಗಣಪಯ್ಯ ಭಟ್ ಹೇಳಿದರು.
ಶನಿವಾರ ಹೊಟೇಲ್‌ ಪ್ರಕಾಶ್‌ನಲ್ಲಿ ಡಾ. ನಾ. ಮೊಗಸಾಲೆ ಅವರಿಗೆ ಧಾರವಾಡದ ‘ಸಾಹಿತ್ಯ ಗಂಗಾ’ ಸಂಸ್ಥೆಯು ಕೊಡಮಾಡುವ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮಾತನಾಡಿ, ಮೊಗಸಾಲೆಯವರ ಪ್ರತಿಯೊಂದು ಕಾದಂಬರಿಯೂ ವಿಭಿನ್ನ ಪ್ರಯೋಗಶೀಲತೆಯಿಂದ ಕೂಡಿದ್ದು, ಕಾದಂಬರಿ ಪ್ರಕಾರಕ್ಕೆ ಮಾದರಿಗಳಾಗಿವೆ. ವಿಶೇಷವಾಗಿ ಕರಾವಳಿಯ ಎಲ್ಲ ಪ್ರಸಿದ್ಧ ಸಾಹಿತಿಗಳನ್ನೂ ನಾವಿಂದು ಮೊಗಸಾಲೆಯವರಲ್ಲಿ ಕಾಣಬಹುದಾಗಿದೆ ಎಂದರು.
ಡಾ. ನಾ. ಮೊಗಸಾಲೆಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅ.ಭಾ.ಸಾ.ಪ.ದ ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷ ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸಾ.ಪ. ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಸಾಹಿತ್ಯ ಸಂಘ ಕಾರ್ಕಳದ ಅಧ್ಯಕ್ಷ ಕೆ.ಪಿ. ಶೆಣೈ, ಕ.ಸಾ.ಪ. ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ, ದಿ. ಸುನಂದಾ ಬೆಳಗಾಂವಕರ ಅವರ ಪುತ್ರಿ ವೈಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಕೃಷ್ಣ ರಾವ್ ಸ್ವಾಗತಿಸಿ, ಸುಭಾಷ್ ಪಟ್ಟಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ರೇವಣ ಸಿದ್ದಪ್ಪ ಜಿ.ಆರ್. ವಂದಿಸಿದರು.































































































error: Content is protected !!
Scroll to Top