ಸರಬ್ಜಿತ್‌ ಸಿಂಗ್‌ ಹಂತಕ ಪಾಕಿಸ್ಥಾನದಲ್ಲಿ ಹತ್ಯೆ

ಇಸ್ಲಾಮಾಬಾದ್‌ : ಗೂಢಚಾರಿಕೆ ಮಾಡಿದ ಆರೋಪದಲ್ಲಿ ಮರಣ ದಂಡನೆಗೆ ಗುರಿಯಾಗಿ ಪಾಕಿಸ್ಥಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್‌ ಸಿಂಗ್‌ ಅವರನ್ನು ಜೈಲಿನಲ್ಲೇ ಸಾಯಿಸಿದ್ದ ಲಷ್ಕರ್‌ ಇ ತಯ್ಯಬದ ಉಗ್ರ ಅಮಿರ್‌ ಸರ್ಫರಾಝ್‌ ತಂಬಾ ಎಂಬಾತನನ್ನು ನಿನ್ನೆ ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ.
ಲಾಹೋರ್‌ನ ಇಸ್ಲಾಮ್‌ಪುರ ಏರಿಯಾದಲ್ಲಿ ನಿನ್ನೆ ರಾತ್ರಿ ಬೈಕಿನಲ್ಲಿ ಬಂದ ಇಬ್ಬರು ಅಮಿರ್‌ ತಂಬಾನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವನನ್ನು ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಿಲ್ಲ.
ಗಡಿ ಭಾಗದಲ್ಲಿರುವ ತನ್ನ ಕೃಷಿ ಜಮೀನನಲ್ಲಿ ಕೆಲಸ ಮಾಡುತ್ತಿರುವಾಗ ತಪ್ಪಿ ಪಾಕಿಸ್ಥಾನ ನೆಲದ ಮೇಲೆ ಕಾಲಿಟ್ಟಿದ್ದ ಸರಬ್ಜಿತ್‌ ಸಿಂಗ್‌ ಅವರನ್ನು ಪಾಕಿಸ್ಥಾನದ ಅಧಿಕಾರಿಗಳು ಬೇಹುಗಾರಿಕೆ ಮತ್ತು ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಿ ಬಂಧಿಸಿದ್ದರು. ನ್ಯಾಯಾಲಯ ಅವರಿಗೆ ಮರಣ ದಂಡನೆ ವಿಧಿಸಿತ್ತು. ಭಾರತ ಸರಕಾರ ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದಾಗಲೇ 2013ರಲ್ಲಿ ಗರಿಷ್ಠ ಭದ್ರತೆಯ ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಅವರ ಮೇಲೆ ಅಮಿರ್‌ ತಂಬಾ ಮತ್ತಿತರರು ಸೇರಿ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇಟ್ಟಿಗೆ ಮತ್ತಿತರ ಮಾರಕಾಯುಧಗಳಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸರಬ್ಜಿತ್‌ ಸಿಂಗ್‌ 2013 ಮೇ 2ರಂದು ಚಿಕಿತ್ಸೆ ಫಲಿಸದೆ ತೀರಿಕೊಂಡಿದ್ದರು.
ಸರಬ್ಜಿತ್‌ ಸಿಂಗ್‌ ಅವರನ್ನು ಬಿಡಿಸಿಕೊಂಡು ಬರಲು ಅವರ ಕುಟುಂಬ ಮುಖ್ಯವಾಗಿ ಅವರ ಸಹೋದರಿ ಅಪಾರ ಪ್ರಯತ್ನಪಟ್ಟಿದ್ದರು. ಅವರ ಹೋರಾಟದ ಕತೆಯನ್ನು ಆಧರಿಸಿ ಬಾಲಿವುಡ್‌ನಲ್ಲಿ ಸರಬ್ಜಿತ್‌ ಎಂಬ ಸಿನೆಮಾ ಬಿಡುಗಡೆಯಾಗಿತ್ತು. ಅದರಲ್ಲಿ ಸರಬ್ಜಿತ್‌ ಸಿಂಗ್‌ ಆಗಿ ರಣದೀಪ್‌ ಹೂಡ ಅಭಿನಯಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸರಬ್ಜಿತ್‌ ಹಂತಕನನ್ನು ಸಾಯಿಸಿದ ಸುದ್ದಿಗೆ ಪ್ರತಿಕ್ರಿಯಿಸಿರುವ ರಣದೀಪ್‌ ಹೂಡ ಆ ಅಜ್ಞಾತ ವ್ಯಕ್ತಿಗಳಿಗೆ ಧನ್ಯವಾದಗಳು, ಕೊನೆಗೂ ಸರಬ್ಜಿತ್‌ಗೆ ನ್ಯಾಯ ಸಿಕ್ಕಿತು ಎಂದಿದ್ದಾರೆ.



































































































error: Content is protected !!
Scroll to Top