ಕಾರ್ಕಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡದ ಕಂಪು ಮತ್ತಷ್ಟು ಪಸರಿಸಲಿ – ಅನಂತ ಶಂಕರ

ಕಾರ್ಕಳ : ಕರ್ನಾಟಕ ಏಕೀಕರಣಗೊಂಡ ಬಳಿಕ ರಾಜ್ಯದಲ್ಲಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ, ನೀರಾವರಿ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಹತ್ತರವಾದ ಬೆಳವಣಿಗೆಯಾಗಿದೆ. ಕನ್ನಡದ ಸಾಹಿತ್ಯದ ಶ್ರೀಮಂತಿಕೆಗೆ 7 ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕನ್ನಡದ ಕಂಪನ್ನು ಪಸರಿಸುವಲ್ಲಿ ಪ್ರತಿಯೋರ್ವ ಕನ್ನಡಿಗನೂ ಕಟಿಬದ್ಧನಾಗಿರುವುದು ಅವಶ್ಯ ಎಂದು ತಹಶೀಲ್ದಾರ್‌ ಅನಂತ ಶಂಕರ ಬಿ. ಕರೆ ನೀಡಿದರು.

ಅವರು ನ. 1ರಂದು 68ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕಾರ್ಕಳ ಗಾಂಧಿಮೈದಾನದಲ್ಲಿ ಧ್ವಜಾರೋಹಣಗೈದು ಬಳಿಕ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್‌ ಟಿ., ಕಸಾಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು.

ಪುಷ್ಪಾರ್ಚನೆ – ಮೆರವಣಿಗೆ
ಇದಕ್ಕೂ ಮುನ್ನ ನಗರದ ಅನಂತಶಯನ ವೃತ್ತದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಬಳಿಕ ಗಾಂಧಿ ಮೈದಾನಕ್ಕೆ ಮೆರವಣಿಗೆ ಸಾಗಿತು. ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿ ಬಂದರು.

ಸಭಾ ಕಾರ್ಯಕ್ರಮ
ಮಂಜುನಾಥ ಪೈ ಸ್ಮಾರಕ ಪ್ರತಿಷ್ಠಾನ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆಯ ಕನ್ನಡ ಅಧ್ಯಾಪಕಿ ಶೈಲಜಾ ಹೆಗ್ಡೆ ಮಾತನಾಡಿ, ಕನ್ನಡ ನಮ್ಮ ತಾಯಿ ಭಾಷೆ. ಕನ್ನಡಕ್ಕೆ ಎಲ್ಲ ಕಡೆಯೂ ಹೆಚ್ಚಿನ ಆದ್ಯತೆ ಸಿಗಬೇಕು. ಕನ್ನಡಿಗರಲ್ಲಿ ಜಾಗೃತಿ, ‌ಭಾಷೆ ಪ್ರೇಮ‌ ಮೈಗೂಡಿಸುವಲ್ಲಿ ಕನ್ನಡ‌ ಬರಹಗಳ‌ ಪಾತ್ರ ಮಹತ್ತರವಾದುದು ಎಂದರು.

ಸುನಿಲ್‌ ಕುಮಾರ್‌ ಕಾರ್ಯ ಶ್ಲಾಘನೀಯ
ಹಿಂದಿ ಭಾಷೆಯನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಕ್ಕೆ. ಕನ್ನಡ ಭಾಷೆಗೆ ನಮ್ಮ‌‌ ಕೊಡುಗೆ ಏನು ಎಂಬುದನ್ನು ನಾವು ಯೋಚಿಸಿದಾಗ ಭಾಷೆಯ ಪರಂಪರೆಯನ್ನು ಮತ್ತಷ್ಟು ಬೆಳೆಸಲು ಸಾಧ್ಯವಾಗುವುದು. ಇದಕ್ಕೆ ಉತ್ತಮ‌ ನಿರ್ದರ್ಶನ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಂದರ್ಭ ಕೈಗೊಂಡ ಕಾರ್ಯಕ್ರಮಗಳು ಕನ್ನಡ‌ ಭಾಷೆ ಮತ್ತು ಸಂಸ್ಕೃತಿಯ ಘನತೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ ಎಂದು ಶೈಲಜಾ ಹೆಗ್ಡೆ ಸ್ಮರಿಸಿದರು.

ಜವಾಬ್ದಾರಿ ನಮ್ಮೆಲ್ಲರದಾಗಿದೆ
ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ ಮಾತನಾಡಿ, ಕನ್ನಡಕ್ಕೆ ನಮ್ಮ ಮೊದಲ ಆದ್ಯೆತೆಯಿರಲಿ. ನಮ್ಮ ಭಾಷೆಯನ್ನು ನಾವು ಮಾತನಾಡಿದಾಗ ಮಾತ್ರ ಭಾಷೆ ಬೆಳೆಯಲು ಸಾಧ್ಯ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮಲ್ಲರದ್ದಾಗಿದೆ ಎಂದರು.

ಕನ್ನಡವನ್ನು ಪ್ರೀತಿಸೋಣ
ಕಸಾಪ ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಕನ್ನಡ ಭಾಷೆಗೆ ಗುಡಿ‌ ಕಟ್ಟಿ ಇಂದು ಸುವರ್ಣ ಕರ್ನಾಟಕದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಕನ್ನಡ ನಮಗೆ ಅಸ್ತಿತ್ವವನ್ನು ನೀಡಿದೆ. ಇಂತಹ ಭಾಷೆಯನ್ನು ನಾವು ಪ್ರೀತಿಸೋಣ, ಬೆಳೆಸೋಣ‌ ಎಂದರು.

ಅಭಿನಂದನೆ
ಇದೇ ಸಂದರ್ಭ‌ ಎಸ್ಎಸ್ಎಲ್‌ಸಿಯಲ್ಲಿ ಕನ್ನಡ ವಿಷಯ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ 59 ವಿದ್ಯಾರ್ಥಿಗಳನ್ನು ಹಾಗೂ ಪಿಯುಸಿಯಲ್ಲಿ 100ಕ್ಕೆ 100 ಅಂಕ ಪಡೆದ 26 ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಶ್ರದ್ದಾಂಜಲಿ ಅರ್ಪಣೆ
ಅ. 31 ರಂದು ನಿಧನರಾದ ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇಲ್ಲಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ.‌ ಸ್ವಾಗತಿಸಿದರು. ಶಿಕ್ಷಕರಾದ ದೇವದಾಸ್ ಕೆರೆಮನೆ ಮತ್ತು ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಶಾಲಾ‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.



































































































error: Content is protected !!
Scroll to Top