ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಸಿನೆಮಾ ಆಗಲಿರುವ ಪ್ರಸಿದ್ಧ ಕಾದಂಬರಿ
ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಎಸ್. ಎಲ್ ಭೈರಪ್ಪ ಅವರ ಪ್ರಸಿದ್ಧ ಕಾದಂಬರಿ ಪರ್ವ ಬೆಳೆತೆರೆ ಮೇಲೆ ಬರಲಿದೆ. ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರ್ವ ಕಾದಂಬರಿಯನ್ನು ಸಿನೆಮಾ ಮಾಡಲು ಹೊರಟಿದ್ದಾರೆ.
ಶನಿವಾರ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ.
ದಿ ಕಾಶ್ಮೀರ್ ಫೈಲ್ಸ್, ದಿ ವ್ಯಾಕ್ಸಿನ್ ವಾರ್ ಸಿನೆಮಾಗಳ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಪರ್ವ ಕೃತಿಯನ್ನು ಸಿನೆಮಾ ಮಾಡುತ್ತಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿ ಭೈರಪ್ಪನವರ ಜತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನೆಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನೆಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ ಎಂದು ತಿಳಿಸಿದ್ದಾರೆ.
ನಟಿ ಪಲ್ಲವಿ ಜೋಷಿ ಮಾತನಾಡಿ, ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಕಾದಂಬರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನೆಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸಾಹಿತಿ ಎಸ್.ಎಲ್. ಭೈರಪ್ಪ ಮಾತನಾಡಿ, ಪರ್ವ ಕಾದಂಬರಿಯನ್ನು ಸಿನೆಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನೆಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ನಲ್ಲಿ ಸಿನೆಮಾ ಮಾಡಬೇಕು. ನಿಜವಾದ ಮಹಾಭಾರತ ಏನು ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ ಎಂದಿದ್ದಾರೆ.
ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನು ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿದ್ದಾರೆ.









































