ಕಾರ್ಕಳದಲ್ಲೊಂದು ʼಪುಸ್ತಕ ಮನೆʼ : ಕ್ರಿಯೇಟಿವ್‌ ಸಂಸ್ಥೆಯ ವಿಶಿಷ್ಟ ಪರಿಕಲ್ಪನೆ

ಅ.16ರಂದು ಶಾಸಕ ಸುನೀಲ್‌ ಕುಮಾರ್‌ ಉದ್ಘಾಟನೆ

ಪುಸ್ತಕ ಪ್ರೇಮಿಗಳಿಗೆ ಬಹಳ ಇಷ್ಟಪಡುವ ಮನೆ

ಕಾರ್ಕಳ : ಒಂದು ಒಳ್ಳೆಯ ಪುಸ್ತಕ ಜತೆಗಿದ್ದರೆ ಒಬ್ಬ ಉತ್ತಮ ಗೆಳೆಯ ಜತಗಿದ್ದಂತೆ ಎನ್ನುತ್ತಾರೆ. ಪುಸ್ತಕಗಳೇ ಜ್ಞಾನದ ಆಕರವಾಗಿದ್ದ ಕಾಲದಲ್ಲಿ ಚಾಲ್ತಿಗೆ ಬಂದ ಮಾತಾದರೂ ಇದು ಇಂದಿಗೂ ಪ್ರಸ್ತುತವಾಗುತ್ತದೆ. ಆದರೆ ಡಿಜಿಟಲ್‌ ತಂತ್ರಜ್ಞಾನದ ಆವಿಷ್ಕಾರದ ಬಳಿಕ ಜ್ಞಾನ ವಿವಿಧ ಮೂಲಗಳಿಂದ ಸಿಗುವುದರಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗು ಇದೆ. ಆದರೆ ಈಗಲೂ ಉತ್ತಮ ಪುಸ್ತಕಗಳಿಗೆ ಓದುಗರು ಇದ್ದಾರೆ. ಇಂಥ ಉತ್ತಮ ಪುಸ್ತಕಗಳನ್ನು ಓದುಗರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕಾರ್ಕಳದ ಕ್ರಿಯೇಟಿವ್‌ ಸಂಸ್ಥೆ ʼಪುಸ್ತಕದ ಮನೆʼ ಎಂಬ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಕ್ರಿಯೇಟಿವ್ ಸಂಸ್ಥೆಯ ಪುಸ್ತಕ ಮನೆಯನ್ನು ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿರುವ ಆದಿಧನ್‌ ದುರ್ಗಾ ಎನ್‌ಕ್ಲೇವ್‌ನ ವಾಣಿಜ್ಯ ಸಂಕೀರ್ಣದಲ್ಲಿ ಅ. 16ರಂದು ಶಾಸಕ ವಿ. ಸುನೀಲ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಉತ್ತಮವಾದ, ಅಧ್ಯಯನಶೀಲ ಪುಸ್ತಕಗಳನ್ನು ಓದುಗರ ಕೈಗಿಡಬೇಕು ಮತ್ತು ಸುಲಭವಾಗಿ ಪುಸ್ತಕಗಳು ಸಿಗಬೇಕು ಎಂಬ ಉದ್ದೇಶದಿಂದ ಕರಾವಳಿ ಮತ್ತು ಮಲೆನಾಡನ್ನು ಕೇಂದ್ರೀಕರಿಸಿ ಕಾರ್ಕಳದಲ್ಲಿ ʼಪುಸ್ತಕ ಮನೆʼ ನಿರ್ಮಾಣಗೊಳ್ಳುತ್ತಿದೆ.

ಬಹುದೊಡ್ಡ ಪುಸ್ತಕ ಮಳಿಗೆ

ಕನ್ನಡ ಮತ್ತು ಇಂಗ್ಲಿಷ್‌ನ ಎಲ್ಲ ಸಾಹಿತ್ಯ ಕೃತಿಗಳು, ಎಲ್ಲ ವಯೋಮಾನದವರಿಗೆ ಬೇಕಾಗುವ, ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾದ ವಿಶೇಷ ಪುಸ್ತಕಗಳ ಸರಣಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಪರಿಕರಗಳು, ಆಕರ್ಷಣೀಯ ಉಡುಗೊರೆಗಳು, ಮಕ್ಕಳ ಕಲಿಕೆಗೆ ಕ್ರಿಯಾಶೀಲ ಆಟಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆ ಮತ್ತು ಗ್ರಂಥಾಲಯಗಳಿಗೆ ವಿಶೇಷ ರಿಯಾಯಿತಿ ಇರಲಿದೆ.

ಶೈಕ್ಷಣಿಕ, ಸಾಹಿತ್ಯ ಸದಭಿರುಚಿ ಉಳಿಸಿಕೊಳ್ಳಲು ಯುವ ಲೇಖಕರಿಗೆ, ಸಾಹಿತಿಗಳಿಗೆ, ಪುಸ್ತಕ ಓದಲು ಸಕಲ ವ್ಯವಸ್ಥೆ ಮತ್ತು ಲೈಬ್ರೆರಿ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರಿಯೇಟಿವ್‌ ಸಂಸ್ಥೆಯ ಏಳು ಮಂದಿ ಈ ಕನಸಿನ ಯೋಜನೆಗಾಗಿ ಶ್ರಮಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಪುಸ್ತಕ ಪೋಷಕ ಯೋಜನೆ

ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಓದುಗರು ಪುಸ್ತಕಕ್ಕಾಗಿ ಪ್ರಸ್ತುತ ಬೆಂಗಳೂರು ಅಥವಾ ಮಂಗಳೂರನ್ನು ಆಶ್ರಯಿಸಬೇಕಾಗಿದೆ. ಅದಕ್ಕಾಗಿ ಕರಾವಳಿ ಹಾಗೂ ಮಲೆನಾಡನ್ನು ಕೇಂದ್ರವಾಗಿರಿಸಿ ಕಾರ್ಕಳದಲ್ಲಿ ಪುಸ್ತಕ ಮನೆಯನ್ನು ತೆರೆಯಲಾಗುತ್ತಿದ್ದು, ವಿದ್ಯಾರ್ಥಿಗಳು ಸಾಹಿತ್ಯಾಭಿಮಾನಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ ಮನೆ ಆರಂಭಗೊಳ್ಳುತ್ತಿದೆ. ಪಠ್ಯಗಳ ಅಗತ್ಯವಿರುವ ಪುಸ್ತಕ, ಸಾಹಿತ್ಯ ಪುಸ್ತಕ, ಮಕ್ಕಳ ಪುಸ್ತಕ, ಕಥೆ, ಕಾವ್ಯ, ತರಬೇತಿ, ಉದ್ಯಮ, ಬಯೋಗ್ರಫಿ ಸೇರಿ ಎಲ್ಲಾ ರೀತಿಯ ಪುಸ್ತಕಗಳು ಇನ್ನು ಮುಂದೆ ಪುಸ್ತಕ ಮನೆಯಲ್ಲಿ ಸಿಗಲಿವೆ.

ಅಮೃತ ಪುಸ್ತಕ ಯೋಜನೆ

ವಿದ್ಯಾರ್ಥಿಗಳು ಓದಿ, ಕಲಿತು ಮುಗಿಸಿರುವ ಪುಸ್ತಕಗಳನ್ನು ಇಲ್ಲಿ ನೀಡಬಹುದಾಗಿದೆ. ಈ ಪುಸ್ತಕಗಳನ್ನು ಅಗತತ್ಯವಿರುವ ಬಡ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದರಿಂದ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ಅಮೃತ ಪುಸ್ತಕ ಯೋಜನೆ ಎಂದು ಹೆಸರಿಡಲಾಗಿದೆ.

ಬುಕ್ ಪಬ್ಲಿಕೇಷನ್ ಕನಸು

ಪುಸ್ತಕ ಮನೆಯಲ್ಲಿ ಸಾಹಿತ್ಯಾಭಿಮಾನಿಗಳು, ಯುವ ಲೇಖಕರು ರಚಿಸಿದ ಪ್ರಸ್ತಕಗಳನ್ನು ತಾವೇ ಮುದ್ರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಯುವ ಸಾಹಿತ್ಯಾಭಿಮಾನಿಗಳಿಗೆ ಪುಸ್ತಕ ಮುದ್ರಣವೂ ಸೇರಿದಂತೆ ಎಲ್ಲ ಕಾರ್ಯಗಳಿಗೆ ಪ್ರಸ್ತಕ ಮನೆ ಸಹಾಯವಾಗಲಿದೆ.































































































error: Content is protected !!
Scroll to Top