ಪಶ್ಚಿಮಘಟ್ಟದಲ್ಲಿ ಕ್ಯಾಂಪ್‌ ಸ್ಥಾಪನೆ ಉಗ್ರರ ಗುರಿ

ದಿಲ್ಲಿಯಲ್ಲಿ ಸೆರೆಯಾದ ಉಗ್ರರು ಬಾಯಿಬಿಟ್ಟ ರಹಸ್ಯ

ಹೊಸದಿಲ್ಲಿ : ದಿಲ್ಲಿಯಲ್ಲಿ ಸೆರೆಯಾಗಿರುವ ಐಸಿಸ್‌ ಉಗ್ರರ ಗುರಿಯೂ ಕರ್ನಾಟಕವೇ ಆಗಿತ್ತು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದ್ದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಸೋಮವಾರ ದಿಲ್ಲಿ ವಿಶೇಷ ಸೆಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹುಬ್ಬಳ್ಳಿ-ಧಾರವಾಡ ಹಾಗೂ ಪಶ್ಚಿಮ ಘಟ್ಟದಲ್ಲಿ ಉಗ್ರ ಟ್ರೈನಿಂಗ್‌ ಕ್ಯಾಂಪ್‌ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಮೊಹಮ್ಮದ್‌ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಆರ್ಷದ್ ವಾರ್ಸಿ ಬಂಧಿತ ಉಗ್ರರು. ಈ ಪೈಕಿ ಶಹನವಾಜ್‌ನನ್ನು 2 ದಿನದ ಹಿಂದೆಯೇ ಬಂಧಿಸಲಾಗಿತ್ತಾದರೂ ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ.
ಸ್ಥಳೀಯರು ಈ ಉಗ್ರ ಸಂಚಿನಲ್ಲಿ ಶಾಮೀಲಾದ ಮಾಹಿತಿ ಸಿಕ್ಕಿಲ್ಲ. ಬಂಧಿತರ ಬಗ್ಗೆ ದಿಲ್ಲಿ ಪೊಲೀಸರ ಜತೆ ಸಂಪರ್ಕದಲ್ಲಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಅಂತಹ ಕೃತ್ಯಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ಹೇಳಿದ್ದಾರೆ.
ಉಗ್ರರು ಹುಬ್ಬಳ್ಳಿ-ಧಾರವಾಡ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್‌ ಜಾಲ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಸಂಬಂಧ ದೇಶದ ಪಶ್ಚಿಮ ಮತ್ತು ದಕ್ಷಿಣದ ಭಾಗಗಳನ್ನು ಪರಿಶೀಲನೆ ಮಾಡಿದ್ದರು ಎಂದು ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಅಧಿಕಾರಿ ಧಾಲಿವಾಲ್‌ ಹೇಳಿದ್ದಾರೆ.
ವಿಶೇಷವೆಂದರೆ ಎಲ್ಲ ಶಂಕಿತ ಉಗ್ರರೂ ಇಂಜಿನಿಯರ್‌ಗಳಾಗಿದ್ದು, ಈ ಪೈಕಿ ವಾರ್ಸಿ ಎಂಬಾತ ಪಿಎಚ್‌ಡಿ ಕೂಡ ಮಾಡುತ್ತಿದ್ದ. ಇವರೆಲ್ಲ ಬಾಂಬ್ ತಯಾರಿಯಲ್ಲಿ ಪರಿಣತರಾಗಿದ್ದರು ಎಂದು ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ತಿಳಿಸಿದೆ. ಮೈನಿಂಗ್ ಇಂಜಿನಿಯರ್ ಆಗಿರುವ ಶಹನವಾಜ್ ಐಸಿಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿದ್ದ. ಶಹನವಾಜ್ ಮೂಲತಃ ದಿಲ್ಲಿಯವನಾದರೂ ಪುಣೆಗೆ ತೆರಳಿದ್ದ. ಜುಲೈನಲ್ಲಿ ಪುಣೆಯಲ್ಲಿ ನಡೆದ ದಾಳಿಯ ವೇಳೆ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ಶಹನವಾಜ್ ಪರಾರಿಯಾಗಿದ್ದ. ಅಂದಿನಿಂದ ಅಡಗುದಾಣದಲ್ಲಿ ಆತ ವಾಸಿಸುತ್ತಿದ್ದ. ಈತ ತನ್ನ ಹೆಂಡತಿ ಬಸಂತಿ ಪಟೆಲ್‌ ಎಂಬಾಕೆಯನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಅವರು ಐಸಿಸ್ ಸಂಬಂಧಿ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಬ್ರೇನ್‌ವಾಶ್‌ ಆಗಿ ಭಯೋತ್ಪಾದಕರಾಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿರುವ ಐಸಿಸ್ ಮಾಡ್ಯೂಲ್‌ನೊಂದಿಗೆ ಇವರಿಬ್ಬರೂ ನಂಟು ಹೊಂದಿದ್ದರು. ಅವರು ದೇಶಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚುರಪಡಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.















































\















error: Content is protected !!
Scroll to Top