ಕಾರ್ಕಳ : ಆಕಸ್ಮಿಕವಾಗಿ ಸಾಂಕ್ರಾಮಿಕ ರೋಗಗಳಿಗೆ ಒಳಗಾದರೂ ಆತಂಕ ಪಡದೇ ವೈದ್ಯರ ಸಲಹೆಯಂತೆ ಔಷಧೋಪಚಾರವನ್ನು ಪಡೆದುಕೊಂಡಲ್ಲಿ ರೋಗ ಗುಣಮುಖವಾಗುತ್ತದೆ ಎಂದು ಶೃಂಗೇರಿಯ ಕಿಗ್ಗಾ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಸುಚೇತಾ ಬಿ. ಮಲ್ಯ ಹೇಳಿದರು. ಅವರು ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆರೋಗ್ಯ ಅಭಿಯಾನದಡಿಯಲ್ಲಿ ನಡೆದ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಅರಿವಿನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಸಾಂಕ್ರಾಮಿಕ ರೋಗಗಳು ಕುಡಿದು ಬಿಸಾಡಿದ ಎಳನೀರಿನ ಚಿಪ್ಪಿನಲ್ಲಿ ಸಂಗ್ರಹಿತವಾದ ನೀರು, ಹೂವಿನ ಕುಂಡಗಳಲ್ಲಿ ಸಂಗ್ರಹಿತವಾದ ನೀರಿನಿಂದ ಹೀಗೆ ಮಡುಗಟ್ಟಿದ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಅದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಅಶುದ್ಧ ನೀರನ್ನು ಕುಡಿಯುವುದರಿಂದಲೂ ರೋಗಗಳು ಬರುತ್ತದೆ. ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜ್ವರ ಅಥವಾ ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ತಪಾಸಣೆ ಮಾಡಿಕೊಂಡು ರೋಗದ ತೀವ್ರತೆಯನ್ನು ತಪ್ಪಿಸಬಹುದು. ಆರೋಗ್ಯ ಕಾಪಾಡುವಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯೂ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಮನೆ ಸುತ್ತಮುತ್ತಲಿನ ವಾತಾವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಹೇಳಿದ ಅವರು ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಸಂಬಂಧಿಸಿದಂತೆ ಸಂವಾದ ನಡೆಸಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ನಯನಾ ಶೆಣೈ ಕಾರ್ಯಕ್ರಮ ನಿರ್ದವಹಿಸಿದರು.



























