ಶ್ರಮಪಡುವ ಛಲವಿದ್ದಲ್ಲಿ ಯಶಸ್ಸು ಖಚಿತ – ರಂಜಿತ್ ಶೆಟ್ಟಿ
ಕಾರ್ಕಳ : ಜೀವನದ ಪರೀಕ್ಷೆಯಲ್ಲಿ ಪಾಸ್ ಆಗಲು ಮಾರ್ಕ್ಸ್ ಮುಖ್ಯ ಅಲ್ಲ. ಬದಲಾಗಿ ಜೀವನಾನುಭವ, ಆತ್ಮವಿಶ್ವಾಸ, ಕಷ್ಟ ಪಟ್ಟು ದುಡಿಯುವ ಛಲ ಮುಖ್ಯ. ಈ ನಿಟ್ಟಿನಲ್ಲಿ ಕಲಿಕೆಯಲ್ಲಿ ಹಿಂದಿದ್ದ ನನಗೆ ಶ್ರಮಪಡುವ ಛಲವನ್ನು ಜೇಸಿ ಶಾಲೆ ಕಲಿಸಿಕೊಟ್ಟಿದೆ. ಇದರಿಂದಾಗಿ ಇಂದು ನಾನು ನನ್ನ ಉದ್ಯೋಗದಲ್ಲಿ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಶಾಲಾ ಹಿರಿಯ ವಿದ್ಯಾರ್ಥಿ ರಂಜಿತ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಮೇ 31 ರಂದು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.
ಹಿರಿಯ ವಿದ್ಯಾರ್ಥಿನಿ ಹುಸ್ನಾ ಶಹರಾನ ಮಾತನಾಡಿ, ಜೇಸಿ ಶಾಲೆಯು ಕೇವಲ ಪಠ್ಯ ಶಿಕ್ಷಣ ಮಾತ್ರವಲ್ಲದೆ ಜೀವನ ಮೌಲ್ಯಾಧಾರಿತ ಶಿಕ್ಷಣವವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇದರಿಂದಾಗಿ ಉತ್ತಮ ನಾಗರಿಕ ಸಮಾಜ ನಿರ್ಮಿಸುವಲ್ಲಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಯಾರೂ ವಿದ್ಯಾರ್ಥಿ ಜೀವನದಲ್ಲಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸುತ್ತಾರೆ ಎಂದು ಅವರು ಹೇಳಿದರು.

ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ್ಯೆ ಶಾಂತ ಹೆಗ್ಡೆ, ಶಾಲಾ ಆಡಳಿತ ಅಧಿಕಾರಿ ಪೂನಂ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ವಂದನಾ ರೈ ಕಾರ್ಯಕ್ರಮ ನಿರೂಪಿಸಿ, ರಕ್ಷಾ ಶೆಟ್ಟಿ ವಂದಿಸಿದರು.


























