ಬಾವಾ-ಅಲಿ ನಡುವೆ ಟಿಕೆಟ್‌ಗೆ ತೀವ್ರ ಪೈಪೋಟಿ
ಬೆಂಗಳೂರು: ಕಾಂಗ್ರೆಸ್ ಮಂಗಳವಾರ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ್ದು, ಭಾನುವಾರ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಏಳು ಜನರಿಗೆ ಟಿಕೆಟ್ ನೀಡಲಾಗಿದೆ. ಆದರೆ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಹೆಸರು ನಾಲ್ಕನೇ ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ. ಈ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಮಂಗಳೂರು ಉತ್ತರದಲ್ಲಿ ಮೊಯಿದ್ದಿನ್ ಬಾವಾ ಮತ್ತು ಇನಾಯತ್ ಅಲಿ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಬಾವಾ ಒಂದು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿದವರು. 2018ರ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಭರತ್ ಶೆಟ್ಟಿ ವಿರುದ್ಧ ಸೋತಿದ್ದಾರೆ. ಬಿಜೆಪಿ ಭರತ್ ಶೆಟ್ಟಿ ಅವರಿಗೆ ಮರಳಿ ಟಿಕೆಟ್ ನೀಡಿದ್ದು, ಅವರು ನಾಮಪತ್ರ ಸಲ್ಲಿಸಿಯೂ ಆಗಿದೆ. ಆದರೆ ನಾಮಪತ್ರ ಸಲ್ಲಿಕೆಗೆ ಇನ್ನು ಒಂದು ಮಾತ್ರ ಬಾಕಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದಿರುವುದು ಕಾರ್ಯಕರ್ತರನ್ನು ಆತಂಕಕ್ಕೆ ತಳ್ಳಿದೆ.
ಆಕಾಂಕ್ಷಿಗಳ ಪೈಕಿ ಸಿದ್ದರಾಮಯ್ಯ ಗುಂಪಿನಲ್ಲಿ ಬಾವಾ ಗುರುತಿಸಿಕೊಂಡಿದ್ದರೆ, ಇನಾಯತ್ ಅಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಇಬ್ಬರೂ ತಮ್ಮ ಪ್ರಭಾವಗಳನ್ನು ಬಳಸಿಕೊಂಡು ಟಿಕೆಟ್ ಪಡೆಯಲು ಪ್ರಯತ್ನಸುತ್ತಿದ್ದಾರೆ. ಸಾಂಪತ್ತಿಕವಾಗಿ ಇಬ್ಬರೂ ಗಟ್ಟಿ ಕುಳಗಳೇ. ಆದರೆ ಕಾಂಗ್ರೆಸ್ ನಾಯಕರಿಗೆ ಯಾಕೆ ಇನ್ನೂ ಈ ಕ್ಷೆತ್ರಕ್ಕೆ ಟಿಕೆಟ್ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದು ನಿಗೂಢ.
ಉಳಿದಂತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಹುಬ್ಬಳ್ಳಿ-ಧಾರಣವಾಡ ಪಶ್ಚಿಮ ಕ್ಷೇತ್ರದಿಂದ ದೀಪಕ್ ಚಿಂಚೋರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಲಿಂಗಸೂರು ಕ್ಷೇತ್ರದಿಂದ ದುರ್ಗಪ್ಪ ಎಸ್ ಹೂಲಗೇರಿ, ಶಿಗ್ಗಾಂವಿಯಿಂದ ಮೊಹಮ್ಮದ್ ಯೂಸುಫ್ ಸವಣೂರು, ಹರಿಹರದಿಂದ ನಂದಗಾವಿ ಶ್ರೀನಿವಾಸ್, ಚಿಕ್ಕಮಗಳೂರು ಕ್ಷೇತ್ರದಿಂದ ಎಚ್.ಡಿ.ತಮ್ಮಯ್ಯ ಹಾಗೂ ಶ್ರವಣಬೆಳಗೊಳದಿಂದ ಎಂ.ಎ.ಗೋಪಾಲಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಒಟ್ಟು 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 216 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಾಕಿ ಉಳಿಸಿಕೊಂಡಿದೆ.ಬೆಂಗಳೂರಿನ ಪುಲಿಕೇಶಿನಗರ, ಸಿ.ವಿ.ರಾಮನ್ನಗರ, ಕೆ.ಆರ್.ಪುರಂ, ಹಾಸನ ಜಿಲ್ಲೆ ಅರಕಲಗೂಡು, ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರ, ರಾಯಚೂರು ನಗರ ಕ್ಷೇತ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಣೆಯನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.
























