ಮೇ 29ಕ್ಕೆ ಶಾಲೆ ರೀ ಓಪನ್‌ : ಸರಕಾರದ ಮಾರ್ಗಸೂಚಿ ಪ್ರಕಟ

ಈ ಬಾರಿ ಏಕರೂಪದ ಶಿಕ್ಷಣ ಅನುಷ್ಠಾನ

ಬೆಂಗಳೂರು : ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29ರಿಂದ ಆರಂಭವಾಗಲಿವೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023–24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮೇ 29ರಿಂದ ಅ.7ರವರೆಗೆ ಮೊದಲ ಅವಧಿಯ ತರಗತಿಗಳು ನಡೆಯಲಿವೆ. ಅ.8 ರಿಂದ 24ರವರೆಗೆ ದಸರಾ ರಜೆ ನೀಡಲಾಗುತ್ತದೆ. ಮತ್ತೆ ಅ.25ರಿಂದ ಏಪ್ರಿಲ್‌ 10, 2024ರವರೆಗೆ ಎರಡನೇ ಅವಧಿಯ ತರಗತಿಗಳು ನಡೆಯಲಿವೆ. ಮೇ 31, 2023 ರಂದು ರಾಜ್ಯದಾದ್ಯಂತ ಏಕಕಾಲಕ್ಕೆ ಶಾಲಾ ಪ್ರಾರಂಭೋತ್ಸವ ಹಮ್ಮಿಕೊಳ್ಳಬೇಕು. ಜೂನ್‌ 30ರ ಒಳಗೆ ಪ್ರವೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 244 ದಿನಗಳನ್ನು ಶಾಲಾ ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ 180 ದಿನಗಳನ್ನು ಮೀಸಲಿಡಲಾಗಿದೆ. ಪರೀಕ್ಷಾ ಕಾರ್ಯಗಳಿಗೆ 26, ಪಠ್ಯೇತರ ಚಟುವಟಿಕೆಗಳಿಗಾಗಿ 24, ಮೌಲ್ಯಮಾಪನ ಪ್ರಕ್ರಿಯೆಗಾಗಿ 10 ದಿನಗಳನ್ನು ನಿಗದಿಪಡಿಸಲಾಗಿದೆ. ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಂಬಂಧಪಟ್ಟಂತೆ 2023-24ನೇ ಸಾಲಿನ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ. ಮೇ 29ರಿಂದ ಶಾಲೆ ಆರಂಭಗೊಳ್ಳಲಿದ್ದು, ಮೇ 31ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಶಾಲಾ ಆರಂಭೋತ್ಸವ ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಶೈಕ್ಷಣಿಕ ವೇಳಾಪಟ್ಟಿ

ಶಾಲೆ ಆರಂಭ: ಮೇ 29, 2023
ಪ್ರಾರಂಭೋತ್ಸವ: ಮೇ 31, 2023
ಪ್ರವೇಶ ಪ್ರಕ್ರಿಯೆ ಮುಕ್ತಾಯಕ್ಕೆ ಗಡುವು: ಜೂನ್‌ 30ರ ಒಳಗೆ
ಮೊದಲನೇ ಶೈಕ್ಷಣಿಕ ಅಧಿವೇಶನ: ಮೇ 29 ರಿಂದ ಅಕ್ಟೋಬರ್ 7 ರವರಗೆ
ದಸರಾ ರಜೆ: 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ
ಎರಡನೇ ಶೈಕ್ಷಣಿಕ ಅಧಿವೇಶನ: ಅಕ್ಟೋಬರ್ 25, 2023 ರಿಂದ ಏಪ್ರಿಲ್ 10, 2024ರವರೆಗೆ
ಬೇಸಿಗೆ ರಜೆ: 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ
ಶಾಲಾ ಕರ್ತವ್ಯದ ದಿನಗಳು: 244 ದಿನ
ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ದಿನ: 180 ದಿನ
ಪರೀಕ್ಷಾ ಕಾರ್ಯ ದಿನಗಳು: 26 ದಿನ
ಪಠ್ಯೇತರ ಚಟುವಟಿಕೆ: 24 ದಿನ
ಮೌಲ್ಯಮಾಪನ ಪ್ರಕ್ರಿಯೆ: 10 ದಿನ

ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನ

ಈ ಬಾರಿ ಏಕರೂಪದ ಶಿಕ್ಷಣ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ನಿಮಿಷ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ಕರ್ನಾಟಕ ಸರಕಾರ ನಡಾವಳಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಇದಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅನುಭವ ಇರುವ ತಜ್ಞರಿಂದ ವರದಿ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಸರಕಾರ ಆದೇಶ ಹೊರಡಿಸಿತ್ತು.
ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಗುರಿಗಳನ್ನು ಹುಟ್ಟುಹಾಕಲು ಇದರಿಂದ ಸಹಕಾರಿಯಾಗುವುದರೊಂದಿಗೆ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ಮಾರ್ಪಾಡು ಮಾಡಲು ನೈತಿಕ ಶಿಕ್ಷಣವು ಸಹಕಾರಿಯಾಗುವುದರಿಂದ, ನೈತಿಕ ಶಿಕ್ಷಣವನ್ನು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವುದು ಸೂಕ್ತವಾಗಿರುತ್ತದೆ ಎಂದು ಸರಕಾರದ ನಡವಳಿಯಲ್ಲಿ ತಿಳಿಸಲಾಗಿದೆ.



































































































error: Content is protected !!
Scroll to Top