ಪರಶುರಾಮನ ಲೀಲೆ – ಕಾರ್ಕಳದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಕ್ಷೇತ್ರದ ಜನತೆಯ ಬೆಂಬಲ – ಬೆನ್ನೆಲುಬಾಗಿ ನಿಲ್ಲುವ ಸ್ವಯಂ ಸೇವಕರ ಅವಿರತ ಶ್ರಮದಿಂದ ಕಾರ್ಯಕ್ರಮ ಯಶಸ್ವಿ – ಸುನೀಲ್‌ ಕುಮಾರ್‌

ಕಾರ್ಕಳ : ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಕಳಕ್ಕೆ ಕಾರ್ಕಳವೇ ಸಂಭ್ರಮದಲ್ಲಿ ತೇಲಾಡುತ್ತಿದೆ. ಮೇರು ಭಾರ್ಗವನ ವಿರಾಟ ಪರ್ವ, ಮೇಳೈಸುವ ಸಾಂಸ್ಕೃತಿಕ ವೈಭವ, ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ಆಹಾರ ವೈವಿಧ್ಯ, ಎಲ್ಲೆಡೆ ಜಗಮಗಿಸುವ, ಕಣ್ಮನ ಸೆಳೆಯುವ ವಿದ್ಯುತ್‌ದೀಪಾಲಂಕಾರ, ವಸ್ತುಪ್ರದರ್ಶನ, ಖ್ಯಾತ ಕಲಾವಿದರು, ಸೆಲೆಬ್ರಿಟಿಗಳ ಆಗಮನ, ಜನರನ್ನು ತನ್ನತ್ತ ಆಕರ್ಷಿಸುವ ಮಳಿಗೆಗಳು, ಉತ್ಸಾಹದಿಂದ ಪಾಲ್ಗೊಳ್ಳುವ ಜನಸಾಗರ. ಹೀಗೆ ಬೈಲೂರಿನೆಲ್ಲೆಡೆ ಸಂಭ್ರಮದ ವಾತಾವರಣ ಕಳೆಗಟ್ಟಿದೆ.

ಕಾರ್ಕಳದ ಕನಸುಗಾರ, ನವ ಕಾರ್ಕಳದ ನಿರ್ಮಾತೃ ಸಚಿವ ವಿ. ಸುನೀಲ್‌ ಕುಮಾರ್‌ ಅವರ ಪರಿಕಲ್ಪನೆಯಂತೆ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣಾ ಕಾರ್ಯಕ್ರಮ ಒಂದು ಐತಿಹಾಸಿಕ, ಅವಿಸ್ಮರಣೀಯ, ಅಪೂರ್ವ, ಅನನ್ಯ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದೆ.

ಜ. 28ರ ಸಂಜೆ 6 ರಿಂದ 7 ಗಂಟೆಯವರೆಗೆ ಅರ್ಚನಾ ಉಡುಪ ಮತ್ತು ತಂಡದವರಿಂದ ಸುಗಮ ಸಂಗೀತ, 7 ರಿಂದ 8 ಗಂಟೆಯವರೆಗೆ ಗಿಚ್ಚಿ ಗಿಲಿ ಹ್ಯಾಸ ತಂಡದಿಂದ ಹಾಸ್ಯ ಸಂಜೆ, 8 ರಿಂದ 9 ಗಂಟೆಯವರೆಗೆ ಮೆಗಾ ಮ್ಯಾಜಿಕ್‌ ಸ್ಟಾರ್‌ ಕುದ್ರೋಳಿ ಗಣೇಶ್‌ ಮತ್ತು ತಂಡದವರಿಂದ ತುಳುನಾಡ ಸಂಸ್ಕೃತಿ ಬಿಂಬಿಸುವ ತುಳುನಾಡ ಜಾದೂ ಪ್ರದರ್ಶನ, 9 ರಿಂದ ಬೀಟ್‌ ಗುರೂಸ್‌ ತಂಡದಿಂದ ಫ್ಯೂಷನ್‌ ಸಂಗೀತ ಸಂಜೆ ಜರುಗಲಿದೆ.

ಉಪವೇದಿಕೆ ಕಾರ್ಯಕ್ರಮ
ಸಂಜೆ 6 ಗಂಟೆಗೆ ಕುಂದಾಪುರದ ಜುಗಲ್‌ಬಂದಿ ವರ್ಷಾ ಭಾಸ್ಕರ್‌ ಮತ್ತು ತಂಡದವರಿಂದ ಕೊಳಲು ಮತ್ತು ವಯಲಿನ್‌, 7 ಗಂಟೆಗೆ ವಿದುಷಿ ಸುಶ್ಮಿತಾ ನೇತೃತ್ವದ ಶಾಂತಿ ನೃತ್ಯನಿಕೇತನ ತಂಡದಿಂದ ಭರತನಾಟ್ಯ ವೈವಿಧ್ಯ ಹಾಗೂ ರಾತ್ರಿ 8 ಗಂಟೆಗೆ ಭಾಗ್ಯಶ್ರೀ ಗೌಡ ತಂಡದಿಂದ ಭಾವಗೀತೆಗಳ ಸಂಭ್ರಮ ಜರುಗಲಿದೆ.

ಥೀಮ್‌ ಪಾರ್ಕ್‌ ಉದ್ಘಾಟನಾ ಸಮಾರಂಭದ ಸಂದರ್ಭ

ಅದ್ಧೂರಿ ಮೆರವಣಿಗೆ
ಇಂದು ಸಂಜೆ 3 ಗಂಟೆಗೆ ಪಳ್ಳಿ ಕ್ರಾಸ್‌ನಿಂದ ಅದ್ಧೂರಿ ಮೆರವಣಿಗೆ ಸಾಗಲಿದೆ. 250ಕ್ಕೂ ಅಧಿಕ ಭಜನಾ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ. ತುಳುನಾಡಿನ ಇತಿಹಾಸದಲ್ಲಿ ಇದೂ ಒಂದು ದಾಖಲೆಯಾಗಲಿದೆ.

ಪಾರ್ಕಿಂಗ್‌ ವ್ಯವಸ್ಥೆ
ನಿನ್ನೆಯಿಂದ ಥೀಮ್‌ ಪಾರ್ಕ್‌ ವೀಕ್ಷಣೆಗೆ ತಾಲೂಕು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಂದು ಮತ್ತು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮನದ ನೀರಿಕ್ಷೆಯಿದ್ದು, ವಾಹನ ಪಾರ್ಕಿಂಗ್‌ ಗಾಗಿ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟು 18 ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಾಡರವರ ಮನೆಯ ಹಿಂದಿನ ಭಾಗ, ಉಮಿಕ್ಕಲ್‌ ಕ್ರಾಸ್ ರಸ್ತೆಯ ಎದುರು ಭಾಗ, ಉಮಿಕ್ಕಲ್‌ ಮೈದಾನದ ಬಲಗಡೆ ವಿವಿಐಪಿ ಪಾರ್ಕಿಂಗ್‌, ಪ್ರಕಾಶ್‌ರವರ ಜಾಗ ಪಾರ್ಕಿಂಗ್‌, ಯರ್ಲಪಾಡಿ ಕ್ರಾಸ್‌ ಎದುರು ಭಾಗ (ನೆಲ್ಸನ್‌ ರವರ ಜಾಗ), ಅಶ್ವತ ಕಟ್ಟೆ ಬಳಿ, ಹೊಟೇಲ್‌ ಶಾಂತಳಾ ಬಳಿ, ಶ್ರೀಶಾ ಹೊಟೇಲ್‌ ಸಮೀಪ, ಬೈಲೂರು ಮಸೀದಿ ಎದುರಗಡೆ ಒಳರಸ್ತೆ ಪಾರ್ಕಿಂಗ್‌, ಬೈಲೂರು ಕಾಲೇಜು ಹಿಂಬದಿ ವಿವಿಐಪಿ ಪಾರ್ಕಿಂಗ್‌ ಹಾಗೂ ಬೈಲೂರು ಸ್ಮಶಾನ ಬಳಿ ಯರ್ಲಪಾಡಿ ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯಿಂದ ಬರುವ ವಾಹನಗಳಿಗಾಗಿ ಬೈಲೂರು ಶಾಲಾ ಮೈದಾನದ ಮುಂಭಾಗದಲ್ಲಿರುವ ಮಸೀದಿ ಬಳಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500 ವಾಹನಗಳನ್ನು ಇಲ್ಲಿ ನಿಲುಗಡೆ ಮಾಡಬಹುದಾಗಿದೆ. ಇನ್ನೂ ಬೆಟ್ಟದ ಸಮೀಪ ಪಾರ್ಕಿಂಗ್‌ಗಾಗಿ ರಿಸರ್ವ ಮಾಡಲಾಗಿದ್ದು, 4 ಸಾವಿರ ವಾಹನಗಳ ಪಾರ್ಕಿಂಗ್‌ಗೆ ಇಲ್ಲಿ ಅವಕಾಶವಿದೆ. ಸುಮಿತ್‌ ನಲ್ಲೂರು, ರವೀಂದ್ರ ಶೆಟ್ಟಿ, ಮುಸ್ತಾಫ್‌ ಕಾರ್ಕಳ, ಸುಜೀತ್‌ ಪೂಜಾರಿ, ಕಿರಣ್‌ ಕಾಂತರಗೋಳಿ, ರಾಕೇಶ್‌ ಶೆಟ್ಟಿ, ಸುಕುಮಾರ ಪೂಜಾರಿ, ವಸಂತ ಕುಲಾಲ್‌, ಮಹೇಶ್‌, ನಿತಿನ್‌ ಹಾಗೂ ದಿನೇಶ್‌ ಅವರನ್ನು ಒಳಗೊಂಡ ಸಮಿತಿಯು ಪಾರ್ಕಿಂಗ್‌ನ ಉಸ್ತುವಾರಿ ವಹಿಸಿದೆ.

ಪೊಲೀಸರ ಕಾರ್ಯ ಶ್ಲಾಘನೀಯ
ಪಾರ್ಕಿಂಗ್‌, ಸುವ್ಯವಸ್ಥೆಗಾಗಿ ಪೊಲೀಸರು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ರಾತ್ರಿ 12:30ವರೆಗೂ ವಿಶ್ರಾಂತಿರಹಿತ ಸೇವೆ ಸಲ್ಲಿಸಿದ್ದು, ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಕಳ ಡಿವೈಎಸ್‌ಪಿ ವಿಜಯ್‌ ಪ್ರಸಾದ್‌, ಕಾರ್ಕಳ ನಗರ ಠಾಣಾ ಎಸ್‌ಐ ಪ್ರಸನ್ನ ಎಂ. ಎಸ್‌., ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಟಿ.ಐ., ಹೆಬ್ರಿ ಠಾಣಾ ಎಸ್‌ಐ ಸುದರ್ಶನ್‌ ದೊಡಮನಿ ನೇತೃತ್ವದಲ್ಲಿ ಸುಮಾರು 250 ಕ್ಕೂ ಅಧಿಕ ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಸರಕಾರಿ ಅಧಿಕಾರಿ, ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, 2 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸ್ವಯಂಪ್ರೇರಿತರಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಕಾರ್ಯಕ್ರಮದಲ್ಲಿ ಎಲ್ಲೂ ಲೋಪವಾಗದಂತೆ ಕಾಳಜಿ ಮೆರೆಯುತ್ತಿದ್ದಾರೆ.

2022ರ ಮಾರ್ಚ್‌ 10ರಿಂದ 20ರವರೆಗೆ ನಡೆದ ಕಾರ್ಕಳ ಉತ್ಸವ ಹಲವಾರು ಉತ್ಸವಗಳಿಗೆ ನಾಂದಿಯಾಗಿತ್ತು. ಕ್ಷೇತ್ರದ ಜನತೆಯ ಬೆಂಬಲ, ಬೆನ್ನೆಲುಬಾಗಿ ನಿಲ್ಲುವ ಸಾವಿರಾರು ಸ್ವಯಂ ಸೇವಕರ ಅವಿರತ ಶ್ರಮದಿಂದ ಕಾರ್ಕಳದಲ್ಲಿನ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರುತ್ತಿದೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ವರ್ಗ, ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಜೋಡಿಸುವ ವಿವಿಧ ಸಮಿತಿಗಳ ಕಾರ್ಯನಿರ್ವಹಣೆ, ಉತ್ಸಾಹದಿಂದ ಪಾಲ್ಗೊಳ್ಳುವ ಜನತೆಯಿಂದಾಗಿ ಥೀಮ್‌ ಪಾರ್ಕ್‌ ಲೋಕಾರ್ಪಣೆ ಕಾರ್ಯಕ್ರಮ ಸ್ಮರಣೀಯಗೊಳ್ಳುತ್ತಿದೆ.
ವಿ. ಸುನೀಲ್‌ ಕುಮಾರ್‌
ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಇರುವ ಕಾರಣದಿಂದ ವಾಹನ ಚಾಲಕರು ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳಲ್ಲಿ ಸಂಚರಿಸಬಹುದಾಗಿದೆ. ಕಾರ್ಕಳದಿಂದ ಉಡುಪಿಗೆ ಹೋಗುವವರು ಪದವು ಮೂಡುಬೆಳ್ಳೆಯಾಗಿ ಸಾಗಬಹುದು, ಹಿರಿಯಡ್ಕದಿಂದ ಬರುವ ವಾಹನಗಳು ಕಣಜಾರು ರಂಗನಪಲ್ಕೆ ನಕ್ರೆಯಾಗಿ ಕಾರ್ಕಳಕ್ಕೆ ತಲುಪಬಹುದು, ಜೋಡುರಸ್ತೆಯಿಂದ ಉಡುಪಿಗೆ ಸಾಗುವ ವಾಹನಗಳು ಗುಡ್ಡೆಯಂಗಡಿ ಹಿರಿಯಡ್ಕ ಆಗಿ ಉಡುಪಿ ತೆರಳಬಹದು.
ಪ್ರಸನ್ನ ಎಂ.ಎಸ್.‌
ಎಸ್‌ಐ ನಗರ ಠಾಣೆ ಪೊಲೀಸ್‌ ಠಾಣೆ

Latest Articles

error: Content is protected !!