ಸಾಧಕ ವ್ಯಕ್ತಿಗಳು ಎರಡೆರಡು ಬಾರಿ ಹುಟ್ಟುತ್ತಾರೆ

ಆಕೆ ಕೊನೆಯವರೆಗೆ ಓಡಾಡಿದ್ದು ಚಿನ್ನದ ಚಪ್ಪಲಿ ಧರಿಸಿ!

ಆಶ್ಚರ್ಯ ಆಯ್ತಾ! ಈ ಉದಾಹರಣೆಗಳನ್ನು ಓದುತ್ತಾ ಹೋಗಿ.
1) ರಾಷ್ಟ್ರಪಿತ ಮಹಾತ್ಮ ಗಾಂಧಿ ಅಕ್ಟೋಬರ್ 2, 1869ರಂದು ಹುಟ್ಟಿರಬಹುದು. ಅದು ಅವರ ಜೀವಶಾಸ್ತ್ರೀಯ ಹುಟ್ಟು. ಆದರೆ ನಿಜವಾಗಿ ಗಾಂಧೀಜಿ ಹುಟ್ಟಿದ್ದು 1893ರ ಜೂನ್ 7ರಂದು! ನಿಮಗೆ ಆಶ್ಚರ್ಯ ಆಯ್ತಾ? ಸ್ವಲ್ಪ ಯೋಚಿಸಿ.
ನಿಜವಾದ ಗಾಂಧಿ ಹುಟ್ಟಿದ್ದು ಅದೇ ದಿನ. ಅಂದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ರೈಲ್ವೇ ಸ್ಟೇಷನ್‌ನಲ್ಲಿ ಟಿಕೆಟ್ ಪಡೆದು ಪ್ರಥಮ ದರ್ಜೆ ಟ್ರೈನ್ ಬೋಗಿಯಲ್ಲಿ ಕುಳಿತಿದ್ದ ಗಾಂಧಿಯನ್ನು ಒಬ್ಬ ರೈಲ್ವೇ ಅಧಿಕಾರಿ ಗಾಂಧಿ ಕರಿಯ ಎಂಬ ಕಾರಣದಿಂದ ಟ್ರೈನಿಂದ ಹೊರಗೆ ದೂಡಿದ್ದು.
ಅದು ಗಾಂಧೀಜಿಯವರ ಹೋರಾಟದ ಸಂಕಲ್ಪ ಗಟ್ಟಿ ಆದ ದಿನ. ಆ ಕ್ಷಣದಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕದ ವರ್ಣ ತಾರತಮ್ಯ ನೀತಿಯ ವಿರುದ್ಧ ಹೋರಾಡುವ ನಿರ್ಧಾರ ಮಾಡಿ ಆಗಿತ್ತು. ಮುಂದೆ ಭಾರತದ ಸ್ವಾತಂತ್ರ್ಯದ ಹೋರಾಟಕ್ಕೂ ಆ ನಿರ್ಧಾರ ನಾಂದಿ ಆಯಿತು ಎನ್ನಬಹುದು. ಆದ್ದರಿಂದ ಜೂನ್ 7 , 1893 ಗಾಂಧಿಯವರ ಎರಡನೇ ಮತ್ತು ನಿಜವಾದ ಹುಟ್ಟುಹಬ್ಬ ಎನ್ನಬಹುದು.
2) ಕೇಂಬ್ರಿಜ್ ವಿವಿಯಲ್ಲಿ ಐಸಿಎಸ್ ಪದವಿ ಪಡೆದು ಭಾರತಕ್ಕೆ ಬಂದಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಸರಕಾರಿ ಉದ್ಯೋಗ ನಿರಾಕರಿಸಿ ಹೋರಾಟಕ್ಕೆ ಇಳಿದಿದ್ದರು. ಕಲ್ಕತ್ತಾದಲ್ಲಿ ಕಾನೂನುಭಂಗ ಚಳವಳಿಯ ನೇತೃತ್ವ ಅವರದ್ದಾಗಿತ್ತು. ಪ್ರತಿ ನಿತ್ಯ ಹಿಂಸಾತ್ಮಕ ರ್ಯಾಲಿಗಳು ನಡೆಯುತ್ತಿದ್ದವು. ಅದೇ ಸಂದರ್ಭದಲ್ಲಿ 21 ಜೂನ್ 1940ರಂದು ನೇತಾಜಿ ಅವರು ವೀರ್ ಸಾವರ್ಕರ್ ಅವರನ್ನು ಅವರ ದಾದರ್‌ನ ನಿವಾಸದಲ್ಲಿ ಭೇಟಿ ಆದರು. ಅದೊಂದು ಐತಿಹಾಸಿಕ ಭೇಟಿ ಎಂದೇ ಕರೆಸಿಕೊಂಡಿದೆ.
ಸಾವರ್ಕರ್ ಅವರು ನೇತಾಜಿ ಅವರನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು “ಸುಭಾಸ್, ನೀನು ಈಗ ಮಾಡುತ್ತಿರುವ ಹೋರಾಟದಿಂದ ಫಲಿತಾಂಶ ಬರಲು ಸಾಧ್ಯವೆ ಇಲ್ಲ. ನೀವು ಯುವಕರು ಸೇರಿ ಬ್ರಿಟಿಷ್ ಅಧಿಕಾರಿಗಳ ಪ್ರತಿಮೆಗಳನ್ನು ಮುರಿದು ಹಾಕುತ್ತೀರಿ. ಅವರು ಇನ್ನೂ ನೂರು ಪ್ರತಿಮೆಗಳನ್ನು ನಿಲ್ಲಿಸುತ್ತಾರೆ. ನಿನ್ನನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸುತ್ತಾರೆ. ಜೈಲಿನ ಕತ್ತಲಿನಲ್ಲಿ ನಿನ್ನ ಹೋರಾಟದ ಕಾವು ತಣ್ಣಗಾಗುತ್ತದೆ.”
“ನೀನು ಮಾಡಬೇಕಾದ ಹೋರಾಟ ಅದಲ್ಲ. ನೀನು ದೇಶದ ಹೊರಗೆ ಹೋಗಿ ಸ್ವಾತಂತ್ಯ್ರ ಹೋರಾಟವನ್ನು ಸಂಘಟನೆ ಮಾಡು. ವಿದೇಶದಲ್ಲಿ ಇರುವ ಭಾರತೀಯರನ್ನು, ಭಾರತದ ಪರವಾಗಿ ಇರುವವರನ್ನು ಸಂಘಟನೆ ಮಾಡು. ಜರ್ಮನ್ ಸರಕಾರ ನಮ್ಮ ಪರವಾಗಿದೆ. ಅಲ್ಲಿಂದ ಹೋರಾಟ ಆರಂಭ ಮಾಡು” ಎಂದು ಆಶೀರ್ವಾದ ಮಾಡಿ ಕಳುಹಿಸಿದರು.
ಮುಂದೆ ಏನಾಯಿತು? ನೇತಾಜಿ ಸುಭಾಷರು ಮುಂದೆ ಹೇಗೆಲ್ಲಾ ಕ್ರಾಂತಿಯ ನಿಜವಾದ ಕಿಡಿ ಆದರು ಎಂದು ನಾವೆಲ್ಲ ಓದಿದ್ದೇವೆ. ಆದ್ದರಿಂದ ಆ ಐತಿಹಾಸಿಕ ಭೇಟಿಯೇ ನೇತಾಜಿ ಅವರ ಜೀವನದ ಬಹು ದೊಡ್ಡ ತಿರುವು ಆಯ್ತು.
3) ಭಾರತಕ್ಕೆ ಮೊದಲ ಕ್ರಿಕೆಟ್ ವಿಶ್ವಕಪ್ಪನ್ನು ಗೆದ್ದ ಕ್ಯಾಪ್ಟನ್ ಕಪಿಲ್ ದೇವ್ ತನ್ನ 14ನೇ ವರ್ಷದವರೆಗೂ ಕ್ರಿಕೆಟನ್ನು ಆಡಿರಲೇ ಇಲ್ಲ. ಆತ ಫುಟ್‌ಬಾಲ್ ಆಟದಲ್ಲಿ ಮುಳುಗಿ ಬಿಟ್ಟಿದ್ದ. ಆದರೆ ಒಂದು ದಿನ ಫುಟ್‌ಬಾಲ್‌ ಕೋಚ್ ಆತನನ್ನು ಕರೆದು “ಹುಡುಗ, ನೀನು ಫುಟ್ಬಾಲ್ ಚೆನ್ನಾಗಿ ಆಡುತ್ತೀಯ. ಆದರೆ ನಿನ್ನ ಕೈಯ್ಯ ಮಾಂಸಖಂಡಗಳು ಕೂಡ ಬಲಿಷ್ಠ ಇವೆಯಲ್ಲ. ನೀನೇಕೆ ಕ್ರಿಕೆಟ್ ಬೌಲಿಂಗನ್ನು ಪ್ರಾಕ್ಟೀಸ್ ಮಾಡಬಾರದು?” ಎಂದದ್ದೇ ಮಹತ್ವದ ತಿರುವು. ಮುಂದೇನಾಯಿತು? ನಮಗೆಲ್ಲ ಗೊತ್ತೇ ಇದೆ.
4) ರಾಷ್ಟ್ರಕವಿ ಕುವೆಂಪು ಅವರಿಗೆ ತನ್ನ ಬಾಲ್ಯದಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಭಾಋಿ ವ್ಯಾಮೋಹ. 14ನೇ ವರ್ಷದವರೆಗೆ ಅವರು ಕೇವಲ ಇಂಗ್ಲಿಷ್ ಕವಿತೆಗಳನ್ನು ಬರೆದರು. ಒಮ್ಮೆ ತಾನು ಬರೆದ ಇಂಗ್ಲಿಷ್ ಕವಿತೆಗಳನ್ನು ತನ್ನ ಇಂಗ್ಲೀಷ್ ಭಾಷೆಯ ಗುರುಗಳಿಗೆ ಅವರು ತೋರಿಸಿದರು. ಅವರೊಬ್ಬ ಬ್ರಿಟಿಷ್ ಶಿಕ್ಷಕರು. ಕವಿತೆಗಳನ್ನು ಮೆಚ್ಚಿಕೊಂಡು ಅವರು ಹೇಳಿದ್ದು ಎರಡೇ ವಾಕ್ಯಗಳನ್ನು “ಮೈ ಡಿಯರ್ ಬಾಯ್. ಯವರ್ ರೈಟಿಂಗ್ಸ್ ಆರ್ ಗುಡ್. ಬಟ್ ವೈ ಕಾಂಟ್ ಯು ರೈಟ್ ಇನ್ ಯುವರ್ ಓನ್ ಮದರ್ ಟಂಗ್ ಕನ್ನಡ?”
ಅದೇ ಸ್ಫೂರ್ತಿಯಿಂದ ಕುವೆಂಪು ಮುಂದೆ ಕನ್ನಡದಲ್ಲಿ ಬರೆಯುತ್ತಾ ಹೋದರು. ಮುಂದೇನಾಯಿತು ನಿಮಗೆಲ್ಲ ಗೊತ್ತೇ ಇದೆ.
5) ನರೇಂದ್ರ ದೇವರನ್ನು ನೋಡಬೇಕು ಎನ್ನುವ ಅದಮ್ಯವಾದ ಹಟದಿಂದ ಗುರುಗಳನ್ನು ಅನ್ವೇಷಣೆ ಮಾಡಲು ಹೊರಟಾಗ ರಾಮಕೃಷ್ಣ ಪರಮಹಂಸರ ಮೊದಲ ಭೇಟಿ, ಗುರುವಿನ ಮೊದಲನೆ ಸ್ಪರ್ಶ, ಮೊದಲನೆ ಮಾತು ಅವರನ್ನು ಹೇಗೆ ಪರಿವರ್ತನೆ ಮಾಡಿತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಕ್ಷಣಕ್ಕೆ ನರೇಂದ್ರನ ಜಾಗದಲ್ಲಿ ವಿವೇಕಾನಂದರು ಹುಟ್ಟಿ ಬಂದಿದ್ದರು.
6) ಮನೋಚಿಕಿತ್ಸಾ ವಿಜ್ಞಾನದ ಪಿತಾಮಹ ಎಂದು ಸರ್ವತ್ರ ಕರೆಸಿಕೊಂಡ ಸಿಗ್ಮಂಡ್ ಫ್ರಾಯ್ಡ್ ಬಾಲ್ಯದಲ್ಲಿ ಒಬ್ಬ ವೃತ್ತಿಪರ ಫುಟ್‌ಬಾಲ್ ಆಟಗಾರ ಆಗಿದ್ದ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ರಾಷ್ಟ್ರಮಟ್ಟದ ಹಂತವನ್ನು ತಲುಪಲು ಆಗಲೇ ಇಲ್ಲ. ಆಗ ಆತ ಕೌನ್ಸೆಲಿಂಗ್ ಪರಿಣತರನ್ನು ಭೇಟಿ ಆಗಿ ತನ್ನ ಮೇಲೆ ಕೆಲವು ಕೌನ್ಸೆಲಿಂಗ್ ಪ್ರಕ್ರಿಯೆಗೆ ಒಳಪಟ್ಟನು. ಆಗ ಅವನಿಗೆ ಏನು ಫಲಿತಾಂಶವು ದೊರೆಯಿತು ಅಂದರೆ ಅವನು ಫುಟ್‌ಬಾಲ್ ಕ್ರೀಡೆಯನ್ನು ಇಷ್ಟ ಪಡುತ್ತಲೇ ಇರಲಿಲ್ಲ. ಅದರಿಂದ ಬರುವ ಜನಪ್ರಿಯತೆ ಮತ್ತು ದುಡ್ಡು ಮಾತ್ರ ಇಷ್ಟ ಪಡುತ್ತಿದ್ದ.
ಆದಿನ ಅವನು ಫುಟ್‌ಬಾಲಿನ ಪ್ರಭಾವದಿಂದ ಹೊರಬಂದು ಮನೋಚಿಕಿತ್ಸಾ ವಿಜ್ಞಾನವನ್ನು ಅಧ್ಯಯನ ಮಾಡಿ ಅದನ್ನು ಬೆಟ್ಟದಷ್ಟು ಎತ್ತರಕ್ಕೆ ಬೆಳೆಸಿದ ಎನ್ನುವುದು ನಿಜವಾದ ಇತಿಹಾಸ.
7) ಲತಾ ಮಂಗೇಷ್ಕರ್ ತನ್ನ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡವರು. ಮನೆಯಲ್ಲಿ ತೀವ್ರವಾದ ಬಡತನ. ಆಕೆ ಹಾಡಿನ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಆಸೆ ಪಡುತ್ತಾರೆ. 12ನೇ ವರ್ಷ ಪ್ರಾಯದಲ್ಲಿ ಒಬ್ಬ ಸಂಗೀತ ನಿರ್ದೇಶಕರ ಬಳಿ ಹೋಗಿ “ನನಗೆ ಹಾಡಲು ಅವಕಾಶ ಕೊಡಿ. ತುಂಬಾ ಚೆನ್ನಾಗಿ ಹಾಡುತ್ತೇನೆ” ಎಂದು ಕೇಳುತ್ತಾರೆ. ಆ ಸಂಗೀತ ನಿರ್ದೇಶಕ ಲತಾ ಅವರನ್ನು ಆಪಾದಮಸ್ತಕ ನೋಡಿದನು. ಲತಾ ಹರಕು ಬಟ್ಟೆ ಧರಿಸಿದ್ದರು. ಕಾಲಿಗೆ ಚಪ್ಪಲಿ ಇರಲಿಲ್ಲ. ಆತ ವಿಚಿತ್ರವಾಗಿ ನೆಗಾಡಿ “ಏನಮ್ಮಾ ಹಾಡಲು ಅವಕಾಶ ಕೇಳುತ್ತೀದ್ದೀಯ. ನಿನ್ನ ಕಾಲಿಗೆ ಚಪ್ಪಲಿ ಕೂಡ ಇಲ್ಲ” ಎಂದು ಕಿಂಡಲ್ ಮಾಡಿದನು.

ಲತಾಗೆ ಇದರಿಂದ ತುಂಬಾ ಅಪಮಾನ ಮತ್ತು ನೋವು ಆಗಿತ್ತು. ಅದನ್ನು ಗಂಭೀರವಾಗಿ ತೆಗೆದುಕೊಂಡು ಅವರು ಸಂಗೀತವನ್ನು ನಿರಂತರವಾಗಿ ಅಭ್ಯಾಸ ಮಾಡಿ ಮುಂದೆ ಭಾರತದ ಕೋಗಿಲೆ ಆದರು. ಅಪಾರವಾದ ಕೀರ್ತಿ ಮತ್ತು ದುಡ್ಡನ್ನು ಸಂಪಾದನೆ ಮಾಡಿದ ನಂತರ ಆಕೆ ಕೊನೆಯವರೆಗೂ ಓಡಾಡಿದ್ದು ಬಂಗಾರದ ಚಪ್ಪಲಿ ಹಾಕಿಕೊಂಡು.
ಹೀಗೆ ನಾನು ಓದಿಕೊಂಡ ಸಾವಿರಾರು ಆತ್ಮಚರಿತ್ರೆಯ ಪುಸ್ತಕಗಳಲ್ಲಿ ನನಗೆ ಗೊತ್ತಾದ ಸಾಮಾನ್ಯ ಅಂಶಗಳು ಎಂದರೆ ಐಕಾನ್‌ಗಳು ಎರಡೆರಡು ಬಾರಿ ಹುಟ್ಟುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಮಹಾನ್ ತಿರುವುಗಳು ಬಂದೇ ಬರುತ್ತವೆ. ಆಗ ನಾವೆಲ್ಲ ಮತ್ತೆ ಮತ್ತೆ ಹುಟ್ಟಿ ಬರುತ್ತೇವೆ.
ಹಾಗೆಯೇ ನಮ್ಮ ಜೀವನದಲ್ಲಿ ಕೂಡ ಇಂತಹ ಮಹತ್ವದ ತಿರುವು ಈಗಾಗಲೇ ಬಂದಿರಬಹುದು ಅಥವಾ ಸದ್ಯದಲ್ಲಿ ಬರಬಹುದು. ಕಾದು ನೋಡೋಣ ಮತ್ತು ಅವುಗಳನ್ನು ನಮ್ಮ ಯಶಸ್ಸಿನ ಲಾಂಚಿಂಗ್ ಪ್ಯಾಡ್ ಮಾಡಿಕೊಳ್ಳೋಣ. ಏನಂತೀರಿ?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Latest Articles

error: Content is protected !!