ಉಡುಗೊರೆ ಪಡೆಯಲು ನೂಕುನುಗ್ಗಲು ಉಂಟಾಗಿ ದುರಂತ
ಹೈದರಾಬಾದ್ : ತೆಲುಗು ದೇಶಂ ಪಾರ್ಟಿಯ ನಾಯಕ , ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ್ಯಾಲಿಯಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಟಿಡಿಪಿ ರ್ಯಾಲಿಯಲ್ಲಿ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದಾರೆ.
ಒಂದು ವಾರದ ಅವಧಿಯಲ್ಲಿ ಟಿಡಿಪಿ ನಾಯಕರ ಸಾರ್ವಜನಿಕ ಸಭೆಯಲ್ಲಿ ನಡೆದಿರುವ ಎರಡನೇ ಕಾಲ್ತುಳಿತ ಘಟನೆ ಇದು. ಡಿ.28 ರಂದು ನೆಲ್ಲೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 8 ಮಂದಿ ಸಾವನ್ನಪ್ಪಿದ್ದರು.
ಚಂದ್ರಬಾಬು ನಾಯ್ಡು ಈ ಕಾರ್ಯಕ್ರಮದಲ್ಲಿ ಮುಂಬರುವ ಸಂಕ್ರಾಂತಿಗಾಗಿ ಜನತೆಗೆ ಉಡುಗೊರೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಕಾರ್ಯಕ್ರಮ ಮುಕ್ತಾಯಗೊಂಡು ನಾಯ್ಡು ಅವರು ನಿರ್ಗಮಿಸಿದ ಬಳಿಕ ಉಡುಗೊರೆ ವಿತರಣೆ ಇತ್ತು, ಈ ಸಂದರ್ಭದಲ್ಲಿ ಜನತೆ ಉಡುಗೊರೆ ಪಡೆಯಲು ನುಗ್ಗಿದ್ದು, ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಚಂದ್ರಬಾಬು ನಾಯ್ಡು ಕಾಲ್ತುಳಿತದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ನೆರವು ಘೋಷಿಸಿದ್ದು, ಮೃತರ ಮಕ್ಕಳಿಗೆ ಎನ್‌ಟಿಆರ್ ಟ್ರಸ್ಟ್‌ನ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ್ದಾರೆ.


































































