ಕಾಶ್ಮೀರದಲ್ಲಿ ಮರುಕಳಿಸಿದ ಹತ್ಯೆ: ಗ್ರೆನೇಡ್‌ ದಾಳಿಗೆ ಇಬ್ಬರು ಬಲಿ

ನಿದ್ದೆಯಲ್ಲಿದ್ದ ಕಾರ್ಮಿಕರ ಮೇಲೆ ಗ್ರೆನೇಡ್‌ ಎಸೆದ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಬೆನ್ನಿಗೆ ಜಿಲ್ಲೆಯ ಹರ್ಮೆನ್ ಪ್ರದೇಶದಲ್ಲಿ ಗ್ರೆನೇಡ್ ದಾಳಿಯಲ್ಲಿ ಉತ್ತರ ಪ್ರದೇಶದ ಕನೌಜ್‌ನ ಇಬ್ಬರು ಸಾವನ್ನಪ್ಪಿದ್ದಾರೆ. ಗ್ರೆನೇಡ್ ದಾಳಿಯ ವೇಳೆ ಸಂತ್ರಸ್ತರು ನಿದ್ದೆಯಲ್ಲಿದ್ದರು.
ಯುಪಿಯ ಕನೌಜ್‌ನ ನಿವಾಸಿಗಳಾದ ಮೊನಿಶ್ ಕುಮಾರ್ ಮತ್ತು ರಾಮ್ ಸಾಗರ್ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಘಟನಾ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಯ ಭಯೋತ್ಪಾದಕ ಲೀಟಿ ಇಮ್ರಾನ್ ಬಶೀರ್ ಗನಿ ಎಂಬುವವನನ್ನು ಶೋಪಿಯಾನ್‌ನ ಹರ್ಮೆನ್‌ನಲ್ಲಿ ಗ್ರೆನೇಡ್ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶೋಪಿಯಾನ್ ಪೊಲೀಸರು ಬಂಧಿಸಿದ್ದಾರೆ.
ಅ.15 ರಂದು ಈ ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌದರಿ ಗುಂಡ್‌ನಲ್ಲಿ ಪುರನ್ ಕ್ರಿಶನ್ ಭಟ್ ಎಂಬ ಕಾಶ್ಮೀರಿ ಪಂಡಿತರು ಅವರ ಮನೆಯ ಸಮೀಪದಲ್ಲಿಯೇ ಗುಂಡಿನ ದಾಳಿಗೆ ಬಲಿಯಾಗಿದ್ದರು.

Latest Articles

error: Content is protected !!