ಮಡಿಕೇರಿ: ಭೂಕಂಪ ಸಂಭವಿಸುವ ಭೀತಿಯಿಂದ ಕೊಡಗಿನ ಜನರು ಈಗ ರಾತ್ರಿ ನಿದ್ದೆಗೆಡುವ ಪರಿಸ್ಥಿತಿ ಬಂದಿದೆ. ಭಾಗಮಂಡಲ ಮತ್ತು ಹಾಗೂ ಸುತ್ತಮುತ್ತಲಿನ ಐದಾರು ಗ್ರಾಮದ ಜನರು ಸರಿಯಾಗಿ ನಿದ್ದೆ ಮಾಡದೆ ಹಲವು ದಿನಗಳಾದವು. ರಾತ್ರಿ ನಿದ್ದೆಯಲ್ಲಿರುವಾಗಲೇ ಭೂಕಂಪ ಸಂಭವಿಸಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ.
ಜನರು ಈಗ ಅವರೇ ಕೆಲವೊಂದು ಭದ್ರತೆಯ ವ್ಯಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಭೂಕಂಪ ಸಂಭವಿಸಿದರೆ ಇತರರಿಗೆ ಎಚ್ಚರಿಕೆ ನೀಡಲು ಪ್ರತಿ ಮನೆಯಿಂದ ಒಬ್ಬ ವ್ಯಕ್ತಿ ಸರದಿಯಲ್ಲಿ ರಾತ್ರಿಯಿಡೀ ಎಚ್ಚರವಾಗಿರುತ್ತಾನೆ. ಯಾವುದೇ ಕಂಪನದ ಅನುಭವಾದರೆ ಅಥವಾ ಧ್ವನಿಯನ್ನು ಕೇಳಿದ ತಕ್ಷಣ ಆತ ಎಲ್ಲರಿಗೂ ಎಚ್ಚರಿಕೆ ನೀಡಬೇಕು. ಕೂಡಲೇ ಜನ ಮನೆಗಳಿಂದ ಹೊರಬರುತ್ತಾರೆ. ನಾವು ನಿದ್ರೆಯಲ್ಲಿ ಸಾಯಲು ಬಯಸುವುದಿಲ್ಲ. ಹೀಗಾಗಿ ಎಚ್ಚರವಿದ್ದು ಕಾವಲು ಕಾಯುವ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಭಯದ ವಾತಾವರಣವಿದೆ. ಅವರು ನೇಪಾಳ ಮತ್ತಿತರೆಡೆ ಸಂಭವಿಸಿದ ಭೀಕರ ಭೂಕಂಪಗಳನ್ನು ನೆನಪಿಸಿಕೊಂಡು ನಡುಗುತ್ತಿದ್ದಾರೆ. ಒಂದೇ ವಾರದಲ್ಲಿ ನಾಲ್ಕು ಬಾರಿ ಭೂಮಿ ನಡುಗಿದ ಬಳಿಕ ಜನರ ಆತಂಕ ಹೆಚ್ಚಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಮತ್ತು ಮುಖಂಡರು ಪದೇ ಪದೆ ಭರವಸೆ ನೀಡುತ್ತಿದ್ದರೂ ಜನರ ಹೆದರಿಕೆ ದೂರವಾಗುತ್ತಿಲ್ಲ. ಕೊಡಗಿನಲ್ಲಿ ಬೆಟ್ಟ ಗುಡ್ಡದ ಬುಡದಲ್ಲೇ ಮನೆಗಳಿರುವುದುರಿಂದ ಕುಸಿದರೆ ಸರ್ವನಾಶವಾಗುತ್ತದೆ ಎಂಬ ಹೆದರಿಕೆ ಜನರಲ್ಲಿದೆ.ನಾಲ್ಕು ವರ್ಷದ ಹಿಂದೆ ಜೋಡುಪಾಲದಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಘಟನೆ ಇಲ್ಲಿನ ಜನರ ನೆನಪಿನಿಂದ ಇನ್ನೂ ಮಾಸಿಲ್ಲ.
