*ಬೀಚಿನಲ್ಲಿ ಚಲಿಸಿ, ಕಲ್ಲಿನ ತಡೆಗೋಡೆ ಮೇಲಿಂದ ಸಾಗಿ ಸಮುದ್ರಕ್ಕೆ ಜಿಗಿದ ಕಾರು
*ಇಬ್ಬರು ಯುವಕರು ಜಿಗಿದು ಪಾರು
ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮರವಂತೆ ಬೀಚಿನಲ್ಲಿ ಶನಿವಾರ ತಡರಾತ್ರಿ ಸಮುದ್ರಕ್ಕೆ ಕಾರು ಉರುಳಿ ಮೃತಪಟ್ಟ ಯುವಕನನ್ನು ಕುಂದಾಪುರ ತಾಲೂಕಿನ ಬೀಜಾಡಿಯ ಗೋಳಿಬೆಟ್ಟು ನಿವಾಸಿ ಸಿಲಾಸ್ ಮಾರ್ಬಲ್‌ನ ಮಾಲಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ (28) ಎಂದು ಗುರುತಿಸಲಾಗಿದೆ. ಕಾಡಿನಕೊಂಡ ನಿವಾಸಿ ನಾರಾಯಣ ಆಚಾರ್ ಅವರ ಪುತ್ರ ರೋಶನ್ ಆಚಾರ್ (23) ನಾಪತ್ತೆಯಾದವರು. ಗಾಯಾಳುಗಳನ್ನು ಕಾಡಿನಕೊಂಡ ನಿವಾಸಿ ಕಾರ್ತಿಕ್ ಹಾಗೂ ಬಸ್ರೂರು ಮೂರುಕೈ ಬಳಿಯ ನಿವಾಸಿ ಸಂದೇಶ್ ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯರಾತ್ರಿ ಕಳೆದು ಸುಮಾರು 12.30ರ ಹೊತ್ತಿಗೆ ಈ ಭೀಕರ ದುರಂತ ಸಂಭವಿಸಿದೆ. ಮಾರುತಿ ಸ್ವಿಫ್ಟ್ ಕಾರು ಹೆದ್ದಾರಿಯಿಂದ ಬೀಚಿಗಿಳಿದು ಕಲ್ಲಿನ ತಡೆಗೋಡೆಯ ಮೇಲೆ ಹಾರಿಕೊಂಡು ಹೋಗಿ ಸಮುದ್ರಕ್ಕೆ ಜಿಗಿದಿದೆ. ವಿರಾಜ್ ಕಾರು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಕಾರು ಕುಂದಾಪುರ ಕಡೆಯಿಂದ ಬೈಂದೂರಿಗೆ ಹೋಗುತ್ತಿತ್ತು.

ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಿಂದ ಸುಮಾರು 40 ಅಡಿ ಕೆಳಕ್ಕೆ ಉರುಳಿದೆ. ಸಮುದ್ರದ ತಡೆಗೋಡೆಗೆ ಹಾಕಿದ್ದ ಬಂಡೆಕಲ್ಲುಗಳ ಮೇಲೆ ಉರುಳಿ ಅಲ್ಲಿಂದ ಸಮುದ್ರಕ್ಕೆ ಹಾರಿ ತಳಭಾಗದ ಬಂಡೆಕಲ್ಲುಗಳ ನಡುವೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಕಾರ್ತಿಕ್ ಮತ್ತು ಸಂದೀಪ್ ಕಾರು ಅವಘಡಕ್ಕೊಳಗಾಗುತ್ತಿದ್ದಂತೆ ಜಿಗಿದ ಕಾರಣ ಬದುಕುಳಿದಿದ್ದಾರೆ. ಸಂದೀಪ್ ಹೆದ್ದಾರಿಗೆ ಬಂದು ಸಹಾಯಕ್ಕಾಗಿ ವಾಹನಗಳನ್ನು ನಿಲ್ಲಿಸಲು ಯತ್ನಿಸಿದರೂ ಬಹಳ ಹೊತ್ತು ಯಾವ ವಾಹನವೂ ನಿಲ್ಲಲಿಲ್ಲ. ಬಳಿಕ ನಡೆದುಕೊಂಡು 2 ಕಿ.ಮೀ. ದೂರದ ತ್ರಾಸಿ ಜಂಕ್ಷನ್‌ಗೆ ತಲುಪಿ ಅಲ್ಲಿನ ಕೆಲ ಯುವಕರಿಗೆ ವಿಷಯ ತಿಳಿಸಿದ್ದಾರೆ. ಯುವಕರೊಂದಿಗೆ ಅಪಘಾತ ನಡೆದ ಸ್ಥಳಕ್ಕೆ ಬಂದು ಬಂಡೆಗಳ ನಡುವೆ ಸಿಲುಕಿದ್ದ ಕಾರ್ತಿಕ್ ಅವರನ್ನು ರಕ್ಷಿಸಿ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ಸೇರಿಸಿದ್ದಾರೆ.

ರಾತ್ರಿಯೇ ಕಾರನ್ನು ಸಮುದ್ರದಿಂದ ಮೇಲೆತ್ತಲು ಪ್ರಯತ್ನಿಸಿದರೂ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಸಾಧ್ಯವಾಗಲಿಲ್ಲ. ಮುಳುಗು ತಜ್ಞ ದಿನೇಶ್ ಗಂಗೊಳ್ಳಿ ಹಾಗೂ ತಂಡದವರು ಸ್ಥಳೀಯರ ನೆರವಿನಿಂದ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪಲ್ಟಿಯ ಬಿರುಸಿಗೆ ನುಜ್ಜುಗುಜ್ಜಾಗಿದ್ದ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿದ್ದ ವಿರಾಜ್ ಮೃತದೇಹ ಇತ್ತು. ರೋಶನ್ ನಾಪತ್ತೆಯಾಗಿದ್ದಾರೆ.