ನಿಟ್ಟೆಯಲ್ಲಿ ಮೊಟ್ಟ ಮೊದಲ ಎಂಆರ್‌ಎಫ್‌ ಘಟಕ ಉದ್ಘಾಟನೆ

ಕಾರ್ಕಳ : ರಾಜ್ಯದ ಎಲ್ಲ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಒಂದು ದಿನದ ತರಬೇತಿಗಾಗಿ ಕರಾವಳಿಯ ಘನ ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಕರೆದುಕೊಂಡು ಬರಲಾಗುವುದು. ಬಳಿಕ ರಾಜ್ಯದ ವಿವಿಧೆಡೆ 50 ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಎ. 3ರಂದು ಸ್ವಚ್ಛ ಭಾರತ್‌ ಮಿಷನ್‌ ಗ್ರಾಮೀಣ ಯೋಜನೆಯಡಿ ನಿಟ್ಟೆ ಪದವಿನಲ್ಲಿ ನಿರ್ಮಾಣವಾದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಉದ್ಘಾಟಿಸಿ ಬಳಿಕ ಮಾತನಾಡಿದರು.
ಹೆಬ್ರಿ ತಾ.ಪಂ. ಕಟ್ಟಡ ನಿರ್ಮಾಣಕ್ಕೆ ಸುನಿಲ್‌ ಕುಮಾರ್‌ ಅವರ ಮನವಿ ಮೇರೆಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಘನ ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಪೂರಕವಾಗಿ 50 ಲಕ್ಷ ರೂ. ವೆಚ್ಚದಲ್ಲಿ ಥರ್ಮಕೋಲ್‌ ಘಟಕ ಸ್ಥಾಪಿಸಲಾಗುವುದು ಎಂದರು.

ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸ್ವಚ್ಛ ಭಾರತ್‌ ಮಿಷನ್‌ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ 2.5 ಕೋಟಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 9.32 ಲಕ್ಷ, ಜಿ.ಪಂ., ತಾ.ಪಂ. 15ನೇ ಹಣಕಾಸು ಯೋಜನೆಯಡಿ 34. 5 ಲಕ್ಷ , ಗ್ರಾಮ ವಿಕಾಸ ಯೋಜನೆಯಡಿ ರೂ. 10 ಲಕ್ಷ, ನಿಟ್ಟೆ ಗ್ರಾಮ ಪಂಚಾಯತ್‌ ಸ್ವಂತ ಅನುದಾನ ರೂ. 21 ಲಕ್ಷ, ಇತರೆ ಅನುದಾನ 29.90 ಲಕ್ಷ ರೂ. ಬಳಸಿಕೊಂಡು ಪದವಿನಲ್ಲಿ ದೇಶದ ಮೊಟ್ಟ ಮೊದಲ ಗ್ರಾಮೀಣ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ ರಚಿಸಲಾಗಿದೆ. ಇದು ಯಶಸ್ವಿಯಾದಲ್ಲಿ ಇಂತಹ ಘಟಕಗಳು ದೇಶದಾದ್ಯಂತ ನಿರ್ಮಿಸಬಹುದಾಗಿದೆ ಎಂದರು.
ಕೇಂದ್ರ ಸರಕಾರದ ಅನುದಾನದಲ್ಲಿ ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ. ಕಾರ್ಕಳ ಮಾಳ ರಸ್ತೆ ಚತುಷ್ಪಥಗೊಳಿಸುವಲ್ಲಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಮಂಗಳೂರು ರಾಮಕೃಷ್ಣ ಮಿಷನ್ ನ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ರಾಮಕೃಷ್ಣ ಮಿಷನ್‌ 2015ರಿಂದ ಸ್ವಚ್ಛತೆಗಾಗಿ ವಿಶೇಷ ಒತ್ತು ನೀಡಿಕೊಂಡು ಬಂದಿದೆ. ಮಂಗಳೂರಿನಲ್ಲಿ ಪ್ರತಿ ದಿನ 5ರಿಂದ 7 ಗಂಟೆ ಸ್ವಚ್ಛತಾ ಕಾರ್ಯವಾಗುತ್ತಿದೆ. ಸುಮಾರು 4 ಸಾವಿರ ಸ್ವಯಂ ಸೇವಕರು ನಮ್ಮೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ವಿ. ಸುನಿಲ್ ಕುಮಾರ್ ನಿಟ್ಟೆ ಪದವಿನಲ್ಲಿ ನಿರ್ಮಾಣವಾದ ಘಟಕ ಮಾದರಿಯಾಗಿ ರೂಪುಗೊಂಡು ಬೇರೆ ತಾಲೂಕಿಗೂ ಪ್ರೇರಣೆಯಾಗಲಿ. ಪದವುವಿನಲ್ಲಿ ಎಂ.ಆರ್.ಎಫ್‌. ಘಟಕ ನಿರ್ಮಾಣವಾಗುವಲ್ಲಿ ಸಹಕರಿಸಿದ ಈ ಪರಿಸರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ಲಾಲಾಜಿ ಆರ್. ಮೆಂಡನ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ನಿಟ್ಟೆ ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿ.ಪಂ. ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌ ಸ್ವಾಗತಿಸಿ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಪ್ರಾಸ್ತವಿಕ ಮಾತುಗಳನ್ನಾಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಎಂ.ಎನ್. ವಂದಿಸಿದರು. ಜ್ಞಾನಸುಧಾ ಪಿಯು ಕಾಲೇಜಿನ ಉಪನ್ಯಾಸಕಿ ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು.

ನನ್ನ ಬಗ್ಗೆ ಪ್ರೀತಿಯಿದೆ
ಹೆಬ್ರಿ ಪಂಚಾಯತ್‌ ಕಟ್ಟಡ ನಿರ್ಮಾಣಕ್ಕೆ ಹಾಗೂ ಥರ್ಮಕೋಲ್‌ ಘಟಕ ಸ್ಥಾಪನೆಗೆ ಅನುದಾನ ಮಂಜೂರುಗೊಳಿಸುವಂತೆ ಈಶ್ವರಪ್ಪ ಅವರಲ್ಲಿ ವಿನಂತಿಸಿದ ಸುನಿಲ್‌ ಕುಮಾರ್‌ ವಿಪರೀತ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆ ಹಾನಿಗೀಡಾಗಿದೆ. ದುರಸ್ತಿಗಾಗಿ ಕಾರ್ಕಳಕ್ಕೆ ವಿಶೇಷ ಅನುದಾನ ಒದಗಿಸಿಕೊಡಬೇಕು. ಪ್ರತಿ ಸಲ ಕಾರ್ಕಳ ಬಂದಾಗ ಇಲ್ಲಿಗೆ ವಿಶೇಷ ಅನುದಾನ ಘೋಷಣೆ ಮಾಡುತ್ತಿದ್ದೀರಿ. ನನ್ನ ಮೇಲೆ ತಮಗೆ ವಿಶೇಷ ಪ್ರೀತಿಯಿದೆ. ಹಾಗಾಗಿ ನಮ್ಮ ಯಾವುದೇ ಬೇಡಿಕೆಗೂ ಇಲ್ಲವೆನ್ನುವವರಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕ ಬಿಡುಗಡೆ
error: Content is protected !!
Scroll to Top