ಕಾರ್ಕಳ : ಗ್ರಾ.ಪಂ. ಸದಸ್ಯರಾದ ಸುಜಿತ್ ಕುಮಾರ್ ಶೆಟ್ಟಿ, ಕಿಶೋರ್ ಮತ್ತು ಗಿರೀಶ್ ಅವರು ಕೈ ಚೀಲದಲ್ಲಿ ತುಂಬಿ ಕಡತಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿ ಶಿರ್ಲಾಲು ಪಂಚಾಯತ್ ಪಿಡಿಒ ಶ್ರೀನಿವಾಸ್ ಅವರು ಅಜೆಕಾರು ಠಾಣೆಯಲ್ಲಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾಗಿದ್ದು, ರಾಜಕೀಯ ಷಡ್ಯಂತ್ರದಿಂದ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾ. 1ರಂದು ಹೆಬ್ರಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ 3 ಜನ ಸದಸ್ಯರ ಮೇಲೆ ಆರೋಪ ಹೊರಿಸಲು ಸ್ಥಳೀಯ ಬಿಜೆಪಿ ನಾಯಕರು ಮತ್ತು ಕ್ಷೇತ್ರದ ಶಾಸಕ ಸಚಿವ ಸುನೀಲ್ ಕುಮಾರ್ ಅವರು ಪಿಡಿಒ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ. ಗ್ರಾಮ ಪಂಚಾಯತ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಣದಲ್ಲಿ ಸದಸ್ಯರ ಪಕ್ಕದಲ್ಲಿ ಪಂಚಾಯತ್ ಮಹಿಳಾ ಸಿಬ್ಬಂದಿ ಇದ್ದಾರೆ. ಹಾಗಾದರೆ ಅವರ ಸಮ್ಮುಖದಲ್ಲಿ ಕಡತವನ್ನು ಚೀಲಕ್ಕೆ ತುಂಬಿಸಲು ಸಾಧ್ಯವೇ ಎಂದು ಮಂಜುನಾಥ್ ಪೂಜಾರಿ ಪ್ರಶ್ನಿಸಿದರು.
ಪ್ರತಿಭಟನೆ ಎಚ್ಚರಿಕೆ
ಈ ಕೂಡಲೇ 3 ಸದಸ್ಯರ ಮೇಲೆ ನೀಡಿರುವ ದೂರನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡಲಾಗುವುದೆಂದು ಮಂಜುನಾಥ ಪೂಜಾರಿ ಎಚ್ಚರಿಸಿದರು. ತನಿಖೆ ನಡೆಸದೇ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿರುವ ಅಜೆಕಾರ್ ಪೊಲೀಸ್ ಉಪನಿರೀಕ್ಷಕ ಹಾಗೂ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಡತಗಳನ್ನು ಹಿಂಪಡೆಯದೆ ಬೇಜವಾಬ್ದಾರಿತನದಿಂದ ವರ್ತಿಸಿದ ಪಿಡಿಒ ಶ್ರೀನಿವಾಸ್ ಅವರನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದಾಗಿ ಮಂಜುನಾಥ ಪೂಜಾರಿ ಹೇಳಿದರು.
ಸುನಿತಾ, ಕೆರ್ವಾಸೆ ಪ್ರಕಾಶ್ ಪೂಜಾರಿ, ಜಯ ಕುಮಾರ್ ಜೈನ್, ಸುನೀಲ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಪ್ರಮುಖರಾದ ದಿನೇಶ್ ಶೆಟ್ಟಿ, ಜನಾರ್ದನ್, ಶಶಿಕಲಾ ಡಿ. ಪೂಜಾರಿ, ಶಶಿಕಲಾ ಆರ್.ಪಿ., ಕರುಣಾಕರ, ವಿಶುಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.