ಆರೋಗ್ಯಧಾರ – ಆರೋಗ್ಯಕರ ಜೇನುತುಪ್ಪ

ಸುಲಭವಾಗಿ ಜೀರ್ಣವಾಗುವಂತಹ ಶುದ್ಧ ಜೇನುತುಪ್ಪ ನಮಗೆ ವರ. ಒಂದು ವರ್ಷದ ಮಗುವಿನಿಂದ ಹಿಡಿದು ವೃದ್ಧರವರೆಗೆ ಬಹು ಉಪಯೋಗಿ ದ್ರವ್ಯ ಈ ಜೇನುತುಪ್ಪ. ಸಾಮಾನ್ಯವಾಗಿ ನಾವು ಚಿಕ್ಕಮಕ್ಕಳಿಗೆ ಔಷಧವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುತ್ತೇವೆ. ಇದರ ಗುಣವೇ ಅಂತಹದ್ದು. ಕೆಲವೊಂದು ಔಷಧ ಚೂರ್ಣದ ಜೊತೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಔಷಧದ ಗುಣವು ಹೆಚ್ಚುವುದು.

ಜೇನುತುಪ್ಪದ ಗುಣಗಳು ಹೀಗಿವೆ
ಜೇನುತುಪ್ಪವು ಮಧುರ ಹಾಗೂ ಕಷಾಯ ರಸದಿಂದ ಹೊಂದಿದ್ದು ಲಘು, ಶುಷ್ಕ ಗುಣದಿಂದ ಕೂಡಿದೆ . ಅನುಷ್ಣಶೀತ ವೀರ್ಯ ಹೊಂದಿದೆ ಹಾಗು ಮೂರೂ ದೋಷಗಳನ್ನು ಸಮತೋಲನಗೊಳಿಸುತ್ತದೆ.

ಜೇನುತುಪ್ಪದ ಶುದ್ಧತೆಯ ಪರೀಕ್ಷೆ ಹೀಗೆ ಮಾಡಿರಿ
ಶುದ್ಧವಾದ ಜೇನುತುಪ್ಪವನ್ನು ನೀರಿಗೆ ಹಾಕಿದಾಗ ಪಾತ್ರೆಯ ಕೆಳಭಾಗ ಸೇರುತ್ತದೆ ಹಾಗು ನೀರಿನಲ್ಲಿ ಕರಗುವುದಿಲ್ಲ.

ಉಪಯೋಗಗಳು ಹೀಗಿವೆ

  1. ಒಂದು ಲೋಟ ನೀರಿಗೆ ಒಂದು ಚಮಚ ಜೇನುತುಪ್ಪ ಹಾಗೂ ಅರ್ಧ ಲಿಂಬೆಹಣ್ಣಿನ ರಸವನ್ನು ಬೆರೆಸಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮಲಬದ್ಧತೆ ಹಾಗೂ ಹೈಪರ್ ಆಸಿಡಿಟಿಯನ್ನು ಕಡಿಮೆಗೊಳಿಸುತ್ತದೆ. ನೀರಿನ ಬದಲಿಗೆ ಬಾರ್ಲಿ ನೀರು ಉಪಯೋಗಿಸಬಹುದು.
  2. ವಸಡಿಗೆ ಹಾಗೂ ಹಲ್ಲಿಗೆ ಸ್ವಲ್ಪ ಹೊತ್ತು ಜೇನುತುಪ್ಪವನ್ನು ಸವರುವುದರಿಂದ ಬಾಯಿ ಶುದ್ಧ ಗೊಳ್ಳುವುದಲ್ಲದೆ ಹಲ್ಲುಗಳಿಗೆ ಹೊಳಪು ನೀಡುತ್ತದೆ. ಹಲ್ಲಿನ ಹುಳುಕುಗಳನ್ನು ಕೂಡ ತಡೆಯಬಹುದು. ಸವರಿದ ಮೇಲೆ ನೀರಿನಿಂದ ಸರಿಯಾಗಿ ಬಾಯಿ ಮುಕ್ಕಳಿಸಿ.
  3. ಎರಡು ಚಮಚ ಜೇನುತುಪ್ಪ ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯ ಹೊತ್ತು ಕುಡಿದರೆ ಒಳ್ಳೆಯ ನಿದ್ದೆ ಹತ್ತುವುದು.
  4. ಕಣ್ಣಿಗೆ, ಹೃದಯಕ್ಕೆ, ಶ್ವಾಸ ಕೋಶಕ್ಕೆ ಒಳ್ಳೆಯದು. ಅನೇಕ ಶ್ವಾಸ ಕೋಶದ ರೋಗಗಳಲ್ಲಿ ಜೇನುತುಪ್ಪವನ್ನು ಬಳಸಲಾಗುವುದು .
  5. ಬೊಜ್ಜು, ಅತಿಸಾರ, ಕೆಮ್ಮು, ವಾಕರಿಕೆ, ಜಂತು ಹುಳುವನ್ನು ದೂರಮಾಡುತ್ತದೆ.
  6. ಐಯನ್, ಕಾಪರ್, ಮ್ಯಾಂಗನೀಸ್ ಇರುವುದರಿಂದ ರಕ್ತಹೀನತೆಗೆ ಒಳ್ಳೆಯದು.
  7. ಬಿಕ್ಕಳಿಕೆ ಹಾಗೂ ಬಾಯಾರಿಕೆಯನ್ನು ಕಡಿಮೆಗೊಳಿಸುತ್ತದೆ.
  8. ಬಾಹ್ಯ ಪ್ರಯೋಗ – ಜೇನುತುಪ್ಪವನ್ನು ತುಪ್ಪದ ಜೊತೆ ಬೆರೆಸಿ ತ್ವಚೆಯ ಮೇಲೆ ಲೇಪಿಸಿದರೆ ಚರ್ಮರೋಗಗಳು, ಗಾಯ, ವ್ರಣ, ಸುಟ್ಟಗಾಯ ಶೀಘ್ರವಾಗಿ ಗುಣವಾಗುವುದು .
  9. ತ್ವಚೆಯ ಹೊಳಪನ್ನು ಹೆಚ್ಚಿಸಲು ಕಡ್ಲೆ ಹಿಟ್ಟು, ಅರಿಶಿನ ಪುಡಿ, ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ನೀರಿನಲ್ಲಿ ಮುಖ ತೊಳೆಯಿರಿ.

ಹೀಗೆ ಮಾಡಬೇಡಿರಿ
*ಜೇನು ತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
*ಬಿಸಿನೀರು ,ಬಿಸಿ ಹಾಲು ಅಥವಾ ಯಾವುದೇ ಬಿಸಿ ಪದಾರ್ಥ ಜೊತೆ ಸೇವಿಸಿದರೆ ಜೇನುತುಪ್ಪವು ಜೀರ್ಣವಾಗುವುದಿಲ್ಲ.

  • ಸಿಹಿ ಇರುವುದರಿಂದ ಜೇನುತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಸೇವಿಸದಿರಿ.
  • ಜೇನುತುಪ್ಪ ಹಾಗೂ ತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸಬಾರದು. ಅದು ವಿರುದ್ಧ ಆಹಾರವಾಗುತ್ತದೆ. ಅಸಮ ಪ್ರಮಾಣದಲ್ಲಿ ಸೇವಿಸಬಹುದು.
  • ಸಿಹಿ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ಜೇನುತುಪ್ಪವನ್ನು ಸೇವಿಸಕೂಡದು.
  • ಮೀನು ಹಾಗೂ ಮಾಂಸದ ಜೊತೆ ಜೇನುತುಪ್ಪವನ್ನು ಸೇವಿಸಿದರೆ ಜೀರ್ಣವಾಗುವುದಿಲ್ಲ.
    ನೆನಪಿಡಿ, ಬಿಸಿ ಮಾಡದೆ ಇರುವ ಜೇನುತುಪ್ಪವು ಆರೋಗ್ಯಕರ ಹಾಗೂ ಸುಲಭವಾಗಿ ಜೀರ್ಣವಾಗುವಂಥಹದ್ದು. ಅದೇ ಜೇನುತುಪ್ಪ ಬಿಸಿ ಮಾಡಿದರೆ ಜೀರ್ಣವಾಗುವುದಿಲ್ಲ.
ಹರ್ಷಾ ಕಾಮತ್























































































































error: Content is protected !!
Scroll to Top