ಕಾರ್ಕಳ : ಕಾರ್ಕಳದ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚ ಪಡೆಯುವುದಿಲ್ಲ, ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಏಕೆಂದರೆ ಜಾಗೃತಿ ಅರಿವು ಸಪ್ತಾಹದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಜ್ಞೆ ಮಾಡಿದ್ದಾರೆ. ಕಾರ್ಕಳ ಪುರಸಭೆ, ತಾಲೂಕು ಕಚೇರಿ, ತಾಲೂಕು ಪಂಚಾಯತ್, ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ಜಾಗೃತಿ ಅರಿವು ಸಪ್ತಾಹದಂಗವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿರುವ ಪ್ರತಿಜ್ಞೆ ಹೀಗಿದೆ.
“ಲಂಚ ಪಡೆಯುವುದಿಲ್ಲ. ಎಲ್ಲ ಕೆಲಸಗಳನ್ನು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಿರ್ವಹಿಸುತ್ತೇನೆ. ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸರಕಾರ, ನಾಗರೀಕರು ಮತ್ತು ಖಾಸಗಿ ವಲಯದ ಎಲ್ಲ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದಾರೆ.
ಸರಕಾರಿ ಅಧಿಕಾರಿಗಳ ಈ ಮಾದರಿ ನಡೆ ಹೊಸ ಕ್ರಾಂತಿಯೊಂದನ್ನು ಸೃಷ್ಟಿ ಮಾಡಲಿದೆ. ಸರಕಾರಿ ಅಧಿಕಾರಿಗಳು ನುಡಿದಂತೆ ನಡೆದಲ್ಲಿ ಕಾರ್ಕಳ ಭ್ರಷ್ಟಾಚಾರಮುಕ್ತಗೊಂಡು ಸುಭಿಕ್ಷವಾಗಲಿದೆ.
ಕಾರ್ಕಳ ಇನ್ನು ಲಂಚ ಮುಕ್ತ: ಸರಕಾರಿ ಅಧಿಕಾರಿಗಳಿಂದ ಸಂಕಲ್ಪ





















