‌ಇಲ್ಲಿ ಮರಗಳನ್ನು ಅಡವಿಟ್ಟು ಬ್ಯಾಂಕಿನಿಂದ ಬಡ್ಡಿ ರಹಿತ ಸಾಲ ಪಡೆಯಬಹುದು

ತಿರುವನಂತಪುರ : ಬ್ಯಾಂಕಿನಿಂದ ಸಾಲ ಪಡೆಯಲು ಚಿನ್ನಾಭರಣ, ಜಾಗದ ದಾಖಲೆಪತ್ರಗಳನ್ನು  ಅಡವಿಡುವುದು ಗೊತ್ತಿದೆ. ಆದರೆ ಇದು ಯಾವುದೂ ಇಲ್ಲದವರು ಏನು ಮಾಡಬಹುದು? ಕೇರಳದ ಈ ಹಳ್ಳಿಯಲ್ಲಿ ಇದಕ್ಕಿದೆ ಪರಿಹಾರ. ಇಲ್ಲಿ ನಿಮ್ಮ ಹಿತ್ತಲಲ್ಲಿ ಒಂದೆರಡು ಮರಗಳಿದ್ದರೆ ಸಾಕು, ಅವುಗಳನ್ನು ಅಡವು ಇಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು.ಅದೂ ಬಡ್ಡಿ ರಹಿತ ಸಾಲ. ತುಸು ವಿಚಿತ್ರ ಎನಿಸಿದರೂ ಇದು ನಿಜ.

ಇದು ಕೇರಳದ ಹಣಕಾಸು ಸಚಿವ ಟಿ.ಎಂ. ಐಸಾಕ್‌ ಅವರ ಯೋಜನೆ. ಪಶ್ಚಿಮ ಘಟ್ಟದ ಮಡಿಲಲ್ಲಿರುವ ವಯನಾಡು ಜಿಲ್ಲೆಯ ಮೀನಂಗಡಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮರ ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡಲು ಜನರಿಗೆ ಉತ್ತೇಜನ ನೀಡುವ ಸಲುವಾಗಿ ಕೇರಳ ಸರಕಾರ ಈ ಯೋಜನೆಯನ್ನುಕಳೆದ ವಾರ   ಪ್ರಾರಂಭಿಸಿದೆ. ಹಿತ್ತಲಲ್ಲಿರುವ ಒಂದು ಮರ ಚಿನ್ನದ ರೀತಿ ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎನ್ನುವುದೇ ಒಂದು ವಿಶಿಷ್ಟ ಪರಿಕಲ್ಪನೆ.

ಈ ಹಿಂದೆಯೂ ಮೀನಂಗಡಿ ಪರಿಸರ ಕಾಳಜಿಗಾಗಿ ಸುದ್ದಿಯಾಗಿತ್ತು. ರಾಜ್ಯದ ಮೊದಲ ಇಂಗಾಲಾಮ್ಲ ಮುಕ್ತ ಎಂಬ ಹಿರಿಮೆ ಸುಮಾರು 33,000 ಜನಸಂಖ್ಯೆಯಿರುವ ಈ ಊರಿಗಿದೆ. 2016ರಲ್ಲೇ ಮೀನಂಗಡಿಯಲ್ಲಿ ಇಂಗಾಲಾಮ್ಲ ಮುಕ್ತ ಗ್ರಾಮ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು.

ಈ ಯೋಜನೆ ಪ್ರಕಾರ ಜನರು ತಮ್ಮ ಜಾಗದಲ್ಲಿ ಸಸಿಗಳನ್ನು ನೆಡಬೇಕು. ಒಂದು ವರ್ಷದ ಬಳಿಕ ಅವರು ಈ ಸಸಿಯನ್ನು ಅಡವಿಟ್ಟು ಸ್ಥಳೀಯ ಸಹಕಾರಿ ಬ್ಯಾಂಕಿನಿಂದ ಬಡ್ಡಿ ರಹಿತ ಸಾಲ ಪಡೆಯಬಹುದು. ಸಸಿ ಸಾಯದಂತೆ ನೋಡಿಕೊಳ್ಳುವ ಹೊಣೆ  ನೆಟ್ಟವರದ್ದೇ. ಈ ಯೋಜನೆಗೆ ಟ್ರೀ ಬ್ಯಾಂಕಿಂಗ್‌ ಎಂದು ಹೆಸರಿಡಲಾಗಿದೆ.

ಒಂದು ಮರಕ್ಕೆ 50 ರೂ.

ಒಂದು ಮರಕ್ಕೆ ಬ್ಯಾಂಕ್‌ ಒಂದು   ವರ್ಷಕ್ಕೆ  50 ರೂ. ಯಂತೆ 10 ವರ್ಷದ ತನಕ ಸಾಲ ಕೊಡುತ್ತದೆ. ಅಂದರೆ ರೈತ ತನ್ನ ಜಮೀನಿನಲ್ಲಿ 100 ಗಿಡಗಳನ್ನು ನೆಟ್ಟರೆ ಬ್ಯಾಂಕಿನಿಂದ  ವರ್ಷಕ್ಕೆ 5,000 ರೂ. ಸಾಲ ಸಿಗುತ್ತದೆ.  ಇದರ ಬಡ್ಡಿಯನ್ನು ಸ್ಥಳೀಯ ಪಂಚಾಯತ್‌ ಕಟ್ಟುತ್ತದೆ.  ರೈತ ಮರವನ್ನು ಕಡಿದರೆ ಮಾತ್ರ ಅಸಲು ಕಟ್ಟಬೇಕು. ಮರ ಕಡಿಯುವುದಿಲ್ಲ ಎಂದಾದರೆ ಅಸಲು ಕಟ್ಟುವ ಅಗತ್ಯವಿಲ್ಲ. ಈ ಯೋಜನೆಗಾಗಿ  ಸರಕಾರ ಸಹಕಾರಿ ಬ್ಯಾಂಕಿನಲ್ಲಿ 10 ಕೋ.ರೂ. ಠೇವಣಿ ಇಟ್ಟಿದೆ. ಈ ಹತ್ತು ಕೋಟಿಯ ಬಡ್ಡಿ ಹಣ ಸಾಲದ ಬಡ್ಡಿ ಕಟ್ಟಲು ಹೋಗುತ್ತದೆ.  

ಹಾಗೆಂದು ರೈತರು ಯಾವುದೋ ಕಾಡು ಮರವನ್ನು ಬೆಳೆಸಿದರೆ ಸಾಲ ಸಿಗುವುದಿಲ್ಲ. ಪಂಚಾಯತ್‌ 34 ಜಾತಿಯ ಮರಗಳನ್ನು ಗುರುತಿಸಿದ್ದು, ಅವುಗಳನ್ನೇ ಬೆಳೆಸಬೇಕು. ಇದರಲ್ಲಿ ಹಲಸು, ಮಾವು ಸೇರಿ ಉತ್ತಮ ಜಾತಿಯ ಮರಗಳೇ ಇವೆ.  

ಉಮೇಶ್‌ ಬಿ.ಕೋಟ್ಯಾನ್

































































































error: Content is protected !!
Scroll to Top