ಐಪಿಎಲ್‌ ರೋಮಾಂಚನ ಮತ್ತು ಟ್ರೋಫಿಯ ಕನಸು

2020ರ ಐಪಿಎಲ್‌ ಪಂದ್ಯಗಳು ಅರ್ಧಾಂಶ ಮುಗಿದಿದ್ದು, ಸಾಕಷ್ಟು ಪಂದ್ಯಗಳು ರೋಚಕವಾದ ಫಲಿತಾಂಶವನ್ನು ಕೊಟ್ಟಿವೆ. ಸಾಕಷ್ಟು  ಹೊಸ ಪ್ರತಿಭೆಗಳ ಶೋಧ ಆಗಿದೆ. ಎರಡು ಪಂದ್ಯಗಳು ಸುಪರ್‌ ಓವರ್‌ ಹಂತದವರೆಗೂ ಹೋಗಿ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸಿವೆ. ಕೊರೊನಾ ಕಾರಣಕ್ಕೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲ ಎಂಬ ಅಂಶವನ್ನು ಹೊರತುಪಡಿಸಿದರೆ ಭಾರತದ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಶೆಯಂತೂ ಆಗಿಲ್ಲ.

ಈ ಬಾರಿ ಐಪಿಎಲ್‌ ಟ್ರೋಫಿಯನ್ನು ಎತ್ತುವ ತಂಡ ಯಾವುದು ಎಂದು ಈಗಲೇ ಹೇಳುವುದು ಕಷ್ಟವಾದರೂ ಕೆಲವು ತಂಡಗಳ ನಿರ್ವಹಣೆ ಸಾಕಷ್ಟು ಆಶಾವಾದವನ್ನು ಹುಟ್ಟಿಸಿದೆ. ಈ ಹಂತದಲ್ಲಿ ತಂಡಗಳ ನಿರ್ವಹಣೆ , ಸಂಘಟನಾ ಸಾಮರ್ಥ್ಯ ಮತ್ತು ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ಗಮನಿಸಿದಾಗ ಪ್ರತಿ ತಂಡಗಳ ಬಲಾಬಲ ಈ ರೀತಿ ಇದೆ.

ಇದುವರೆಗಿನ ನಿರ್ವಹಣೆಯ ಆಧಾರದ ಮೇಲೆ ಮುಂಬಯಿ ಇಂಡಿಯನ್ಸ್‌ ಎಂಟು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಯುವಕರನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ 8  ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ತನ್ನ ಅರ್ಹತೆಯನ್ನು ಸಾಬೀತುಪಡಿಸಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 6 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿಯೂ, ಕೋಲ್ಕತ್ತಾ ನೈಟ್‌ ರೈಡರ್ಸ್‌ 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿಯೂ ಕಾಣಿಸಿಕೊಂಡಿದ್ದು, ಮುಂದಿನ ಪಂದ್ಯಗಳಿಗೆ ಮಾನಸಿಕವಾಗಿ ಸಿದ್ಧವಾಗುತ್ತಿವೆ.

ಮೂರು ಬಾರಿ ಚಾಂಪಿಯನ್‌ ಆಗಿದ್ದ ಚೆನ್ನೈ ಸುಪರ್‌ಕಿಂಗ್‌ ಒಂದು ಬಾರಿ ಟ್ರೋಫಿ ಎತ್ತಿಕೊಂಡ ಸನ್‌ ರೈಸರ್ಸ್‌ ಹೈದರಾಬಾದ್‌, ಒಂದು ಬಾರಿ ಟ್ರೋಫಿ ಎತ್ತಿಕೊಂಡ ರಾಜಸ್ಥಾನ ರಾಯಲ್ಸ್‌, 4 ಅಂಕಗಳೊಂದಿಗೆ ಕಾಣಿಸಿಕೊಂಡಿದ್ದು, ಇದುವರೆಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿಲ್ಲ.

ಭಾರಿ ಭರವಸೆ ಮೂಡಿಸಿದ್ದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಕೇವಲ 2  ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿ ಇರುವುದು ಕನ್ನಡಿಗರಿಗಂತೂ ತುಂಬ ನೋವಿನ ಸಂಗತಿ.

ಮುಂಬಯಿ ಇಂಡಿಯನ್ಸ್‌

ಈಗಾಗಲೇ ನಾಲ್ಕು ಬಾರಿ ಐಪಿಎಲ್‌ ಟ್ರೋಫಿ ಗೆದ್ದಿರುವ ದಾಖಲೆ ಈ ತಂಡದ ಹೆಸರಲ್ಲಿದೆ. ರೋಹಿತ್‌ ಶರ್ಮ ತಂಡದ ನಾಯಕನಾಗಿ ತಂಡದಲ್ಲಿ ಸ್ಫೂರ್ತಿ ತುಂಬಿಸುತ್ತಿದ್ದಾರೆ. ಕ್ವಿಂಟನ್‌ ಡಿʼಕಾಕ್‌ , ಸೂರ್ಯಕುಮಾರ್‌, ಪಾಂಡ್ಯ ಸಹೋದರರು, ಕೈರನ್‌ ಪೊಲಾರ್ಡ್‌, ಇದುವರೆಗಿನ ಎಲ್ಲ ಪಂದ್ಯಗಳಲ್ಲಿ ಕೂಡಾ ಬ್ಯಾಟ್‌ ಮೂಲಕ ಸೌಂಡ್‌ ಮಾಡಿದ್ದಾರೆ. ರಾಹುಲ್‌ ಚಹರ್‌ , ಟ್ರೆಂಟ್‌ ಬೋಲ್ಟ್‌ ಮತ್ತು ಜಸ್‌ಪ್ರೀತ್‌ ಬುಮ್ರ ಪ್ರತಿ ಪಂದ್ಯದಲ್ಲಿ ವಿಕೆಟ್‌ ಹಾರಿಸಿದ್ದಾರೆ.  

ಅತಿ ಹೆಚ್ಚು ಆಲ್‌ ರೌಂಡರ್ಸ್‌ ಹೊಂದಿರುವ ಈ ತಂಡವು ಈ ವರ್ಷದ ರೇಸಲ್ಲಿ ಬೇರೆ ತಂಡಗಳಿಗಿಂತ ಮುಂದಿದೆ ಎಂದು ಖಚಿತವಾಗಿ ಹೇಳಬಹುದು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಅತ್ಯಂತ ಬಲಾಢ್ಯ ಆಟಗಾರರನ್ನು ಹೊಂದಿದ್ದೂ ಕೂಡ ಒಮ್ಮೆಯೂ ಟ್ರೋಫಿ ಗೆಲ್ಲದ ದುರದೃಷ್ಟ ತಂಡ ಇದು. ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಮತ್ತು ಡಿ ವಿಲ್ಲಿಯರ್ಸ್‌ ಅವರನ್ನೇ ಡಿಪೆಂಡ್‌ ಆಗುವುದು ಈ ತಂಡದ ದೌರ್ಬಲ್ಯ. ದೇವದತ್ತ ಪಡಿಕ್ಕಲ್‌ ಈ ವರ್ಷದ ಶೋಧ ಎಂದು ಖಚಿತವಾಗಿ ಹೇಳಬಹುದು.

ಸ್ಟೇಡಿಯಂಗಳು ಸಣ್ಣದಾದುದರಿಂದ ಯಜುವೇಂದ್ರ ಚಾಹಲ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತುಂಬ ದುಬಾರಿಯಾಗುತ್ತಿದ್ದಾರೆ. ನವದೀಪ್‌ ಸೈನಿ , ಆರನ್‌ ಫಿಂಚ್‌, ಮೊಯಿನಾಲಿ ಮೊದಲಾದವರು ಕ್ಲಿಕ್‌  ಆದರೆ ಆರ್‌ಸಿಬಿ ಈ ವರ್ಷ ಫೈನಲ್‌ವರೆಗೆ ಬರಬಹುದು.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌

ಕರ್ನಾಟಕದ ಐದು ಜನ ಆಟಗಾರರನ್ನು ಹೊಂದಿರುವ  ಕಾರಣಕ್ಕೆ ಮತ್ತು ಕೆ. ಎಲ್.‌ ರಾಹುಲ್‌ ಕ್ಯಾಪ್ಟನ್‌ ಆಗಿದ್ದ ಕಾರಣಕ್ಕೆ ಈ ತಂಡ ಭಾರಿ ಭರವಸೆ ಮೂಡಿಸಿತ್ತು. ರಾಹುಲ್‌ ಮತ್ತು ಮಯಾಂಕ್‌ ಅಗರ್‌ವಾಲ್‌ ಉತ್ತಮ ಆರಂಭವನ್ನು ಕೊಟ್ಟರೂ ಮಿಡಲ್‌ ಆರ್ಡರಲ್ಲಿ ಸತತವಾಗಿ ಆಟಗಾರರು ವಿಫಲರಾಗುತ್ತಿದ್ದಾರೆ. ರವಿ ಬಿಷ್ಣೋಯ್‌ ಈ ವರ್ಷದ ಇನ್ನೊಂದು ಶೋಧ. ಕ್ರಿಸ್‌ಗೇಲ್‌ ಅವರಂಥ ಬಲಿಷ್ಠ ಆಟಗಾರನನ್ನು ಈ ವರೆಗೆ ಆಡಿಸದಿರುವ ಬಗ್ಗೆ ಕೂಡ ಪಂಜಾಬ್‌ ತಂಡವನ್ನು ಆಕ್ಷೇಪಿಸುವವರಿದ್ದಾರೆ. ಶೆಲ್‌ಡನ್‌ ಕ್ವಾಟ್ರಲ್‌ ಮತ್ತು ಮಹಮ್ಮದ್ ಶಮಿ  ಕ್ಲಿಕ್‌ ಆದರೆ ಮನ್‌ದೀಪ್‌ ಸಿಂಗ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಫಾರ್ಮಿಗೆ ಮರಳಿದರೆ  ಪಂಜಾಬ್‌ ತಂಡ ಕೂಡ ಸುಪರ್‌ ಫೋರ್‌ ಹಂತಕ್ಕೆ ಬರಬಹುದು.

ಕೋಲ್ಕೋತ್ತಾ ನೈಟ್‌ರೈಡರ್ಸ್‌

ಈ ವರೆಗೆ ಎರಡು ಬಾರಿ ಚಾಂಪಿಯನ್‌ ಪಟ್ಟಕ್ಕೆ ಏರಿರುವ ಕೋಲ್ಕೋತ್ತಾ ತಂಡ ಶುಭಂ ಗಿಲ್‌ ಎಂಬ ಅದ್ಭುತ ಆರಂಭಿಕ ಆಟಗಾರನನ್ನು ಈ ಬಾರಿ ಹೊಂದಿದೆ. ಆದರೆ ತಂಡದ ನಾಯನಾಗಿ ದಿನೇಶ್ ಕಾರ್ತಿಕ್‌ ಮಿಂಚುತ್ತಿಲ್ಲ. ಇಯಾನ್‌ ಮೋರ್ಗನ್‌ಗೆ  ನಾಯತ್ವವನ್ನು ಕೊಡಲು ಕೂಗು ಆರಂಭವಾಗಿದೆ. ಸುನಿಲ್‌ ನಾರಾಯಣ್‌ ಮತ್ತು ರಸೆಲ್‌ ತಮ್ಮ ಎಂದಿನ ಫಾರ್ಮನ್ನು ಕಳೆದುಕೊಂಡಿದ್ದಾರೆ. ಪ್ಯಾಟ್‌ ಕಮಿನ್ಸ್‌ , ನಿತೇಶ್‌ ರಾಣಾ ಮಿಂಚಿದರೆ ಶಿವಂ ಮಾವಿ ಮತ್ತು ಕಮಲೇಶ್‌ ನಾಗರಕೋಟಿ ಅವರಿಗೆ ಹೆಚ್ಚಿನ ಅವಕಾಶ ನೀಡಿದರೆ ಕೆಕೆಆರ್‌ ತಂಡ ಸುಪರ್‌ ಫೋರ್‌ ಹಂತಕ್ಕೆ ಬರಬಹುದು.

ಚೆನ್ನೈ ಸುಪರ್‌ಕಿಂಗ್

ಸೋಷಿಯಲ್‌ ಮೀಡಿಯಾದಲ್ಲಿ ಡ್ಯಾಡಿಗಳ ತಂಡ ಎಂದು ಟ್ರೋಲ್‌ ಆಗಿರುವ ಈ ತಂಡ ಈ ಬಾರಿ ತನ್ನ ಹರಿತವನ್ನು ಕಳೆದುಕೊಂಡಿದೆ. ಧೋನಿ ನಾಯಕತ್ವದಲ್ಲಿ ಎಂದಿನ ಜೋಶ್‌ ಕಾಣುತ್ತಿಲ್ಲ. ಶೇನ್‌ ವಾಟ್ಸನ್‌ ಮತ್ತು ಡುಪ್ಲೆಸಿಸ್‌ ಒಂದೆರಡು ಮ್ಯಾಚುಗಳಲ್ಲಿ ಉತ್ತಮ ಆರಂಭವನ್ನು ಕೊಟ್ಟರೂ ಸ್ಥಿರತೆ ಇಲ್ಲ. ಕೇದಾರ್‌ ಜಾಧವ್‌ , ಮುರಳಿ ವಿಜಯ್‌ , ಸ್ಯಾಮ್‌ ಕರಣ್‌ ಆಗೊಮ್ಮೆ ಈಗೊಮ್ಮೆ ಮಿಂಚುತ್ತಿದ್ದಾರೆ. ಆದರೆ ಗೆಲ್ಲುವ ಆಟ ಇಲ್ಲ. ಡ್ವೆನ್‌ ಬ್ರಾವೊ , ರವೀಂದ್ರ ಜಡೆಜಾ, ಸ್ಥಿರತೆಯ ಪ್ರದರ್ಶನ ನೀಡಿದರೆ ಚೆನ್ನೈ ತಂಡ ಬಹಳ ಕಷ್ಟದಲ್ಲಿ ಸುಪರ್‌ ಫೋರ್‌ ಹಂತಕ್ಕೆ ಬರಬಹುದು.

ಡೆಲ್ಲಿ ಕ್ಯಾಪಿಟಲ್ಸ್‌  

ಟೀಮ್‌ ಸ್ಪಿರಿಟ್‌ ನೋಡಿದರೆ ಈ ತಂಡ ಬೇರೆಲ್ಲ ತಂಡಗಳಿಗಿಂತ ಎತ್ತರದಲ್ಲಿದೆ. ಇದುವರೆಗಿನ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಅವರು ಗೆದ್ದಿದ್ದಾರೆ. ಶ್ರೇಯಸ್‌ ಅಯ್ಯರ್‌ ಒಬ್ಬ ಉತ್ತಮ ನಾಯಕನಾಗಿ ಮಿಂಚುತ್ತಿದ್ದಾರೆ. ಪೃಥ್ವಿ ಶಾ ಮತ್ತು ಶಿಖರ್‌ ಧವನ್‌ ಆರಂಭಿಕ ಆಟಗಾರರಾಗಿ ಎಲ್ಲ ಪಂದ್ಯಗಳಲ್ಲೂ ಮಿಂಚಿದ್ದಾರೆ. ಮಾರ್ಕಸ್‌ ಸ್ಟೊಯಿನಿಸ್‌ ಮತ್ತು ಕಗಿಸೊ ರಬಡ ಈಗಾಗಲೇ ಮ್ಯಾಚ್‌ ವಿನ್ನರ್ಸ್ ಗಳಾಗಿ ಕಾಣಿಸಿಕೊಂಡಿದ್ದಾರೆ. ಅಮಿತ್‌ ಮಿಶ್ರ, ರವಿಚಂದ್ರನ್‌ ಆಶ್ವಿನ್‌, ಅಕ್ಷರ್‌ ಪಟೇಲ್ ಚೆನ್ನಾಗಿ ಆಡಿದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಫೈನಲ್‌ಗೆ ಬರುವುದು ಖಂಡಿತ.

ಸನ್ ರೈಸರ್ಸ್‌ ಹೈದರಾಬಾದ್‌

ಡೇವಿಡ್‌ ವಾರ್ನ್‌ನಂಥ ಒಬ್ಬ ನಾಯಕ ಇಡೀ ತಂಡವನ್ನು ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಸುವುದು ಈ ವರ್ಷದ ಅಚ್ಚರಿ. ಅವರು ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ. ಕೇನ್‌ ವಿಲ್ಲಿಯಮ್ಸನ್‌ , ಮನೀಷ್‌ ಪಾಂಡೆ, ಜಾನಿ ಬೇಸ್ಟ್ರೊ ಈ ವರ್ಷ ಎಲ್ಲ ಪಂದ್ಯಗಳಲ್ಲೂ ಚೆನ್ನಾಗಿ ಆಡಿದ್ದಾರೆ. ಸತತ ಉತ್ತಮವಾದ ಇಕಾನಮಿ ಹೊಂದಿರುವ ರಶೀದ್‌ ಖಾನ್‌ ಎಂದಿನಂತೆ ಮಿಂಚುತ್ತಿದ್ದಾರೆ. ಅದ್ಭುತವಾದ ಯಾರ್ಕರ್‌ ಎಸೆಯುವ ನಟರಾಜನ್‌ ಈ ಬಾರಿಯ ಶೋಧ. ಪ್ರಿಯಂ ಗರ್ಗ್‌ ಪ್ರತಿಭೆಯನ್ನು ತಂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅದೃಷ್ಟದ ಬಲ ಇದ್ದರೆ ಹೈದರಾಬಾದ್‌ ತಂಡ ಈ ಬಾರಿ ಸುಪರ್‌ ಫೋರ್‌ ಹಂತಕ್ಕೆ ಬರಬಹುದು.

ರಾಜಸ್ಥಾನ ರಾಯಲ್ಸ್‌

ಎಲ್ಲ ಪ್ರತಿಭೆಗಳಿದ್ದರೂ ಅಗತ್ಯವಿದ್ದಾಗ ಯಾರೂ ಮಿಂಚದಿರುವ ಒಂದು ದುರದೃಷ್ಟ ತಂಡವೆಂದರೆ ರಾಜಸ್ಥಾನ ರಾಯಲ್ಸ್.‌ ಸ್ಟೀವ್‌ ಸ್ಮಿತ್‌ ಅವರಂಥ ಬಲಿಷ್ಠ ಕ್ಯಾಪ್ಟನ್‌ ಕೂಡ ಏನೂ ಮಾಡಲು ಸಾಧ್ಯವಾಗದೆ ಹತಾಶರಾಗುತ್ತಿದ್ದಾರೆ. ಜೋಸ್‌ ಬಟ್ಲರ್‌ , ಟಾಮ್‌ ಕರಣ್‌ , ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಸಂಜು ಸ್ಯಾಮ್ಸನ್‌ ದೈತ್ಯ ಪ್ರತಿಭೆ ಈ ವರ್ಷ ತಂಡವನ್ನು ಗೆಲ್ಲಿಸುತ್ತಿಲ್ಲ. ಈ ಬಾರಿ ಒಂದೆರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ರಾಹುಲ್‌ ತೇವಾಟಿಯ ಉತ್ತಮ ಆಲ್‌ರೌಂಡರ್‌ ಆಗಿ ಮಿಂಚುತ್ತಿದ್ದಾರೆ. ಆದರೆ ಮಿಡಲ್‌ ಆರ್ಡರ್‌ ಆಟಗಾರರ  ಅಸ್ಥಿರ ನಿರ್ವಹಣೆ ಎಲ್ಲ ಬಣ್ಣ ಮಸಿ ನುಂಗಿತು ಎಂಬಂತಾಗಿದೆ. ಈ ತಂಡ ಸುಪರ್‌ ಫೋರ್‌ ಹಂತಕ್ಕೆ ತಲುಪುವುದು ತುಂಬ ಕಷ್ಟ ಎಂದು  ಅನಿಸುತ್ತಿದೆ.  

ಇನ್ನೂ ಆರ್ಧಕ್ಕಿಂತ ಹೆಚ್ಚು ಪಂದ್ಯಗಳು ಬಾಕಿ ಇದ್ದು ರೋಮಾಂಚಕ ಫಲಿತಾಂಶವನ್ನು ಪಡೆಯಲಿ ಮತ್ತು ಬಲಿಷ್ಠವಾದ ತಂಡ ಟ್ರೋಫಿಯನ್ನು ಎತ್ತಿ ಹಿಡಿಯಲಿ ಎನ್ನುವುದು ಕ್ರಿಕೆಟ್‌ ಪ್ರೇಮಿಗಳ ಆಶಯ.



































































































error: Content is protected !!
Scroll to Top