
ತೃಶ್ಶೂರು ಜಿಲ್ಲೆಯ ಕೈಪರಂಬುವಿನ ಅಜಯನ್ 6 ಬಸ್ಸುಗಳ ಮಾಲಕ. 18 ಮಂದಿ ಖಾಯಂ ನೌಕರರು ಅವರ ಬಳಿಯಿದ್ದರು. ಕೈಪರಂಬುವಿನ ಮಂಚೇರಿ ಎಂಬ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು ಅಜಯನ್. ಇಡೀ ಮಂಚೇರಿ ಕುಟುಂಬ ಸಾರಿಗೆ ವ್ಯವಹಾರ ನಡೆಸುತ್ತಿದ್ದು, 20ಕ್ಕೂ ಹೆಚ್ಚು ಬಸ್ಗಳು ಈ ಕುಟುಂಬದ ಬಳಿಯಿದೆ.
ಬಸ್ಸುಗಳ ಜೊತೆಗೆ ಹೆಚ್ಚುವರಿಯಾಗಿ ತುಸು ಸಂಪಾದಿಸುವ ಸಲುವಾಗಿ ಅವರು ಕಳೆದ ಫೆಬ್ರವರಿಯಲ್ಲಷ್ಟೇ ಚಿಕ್ಕದೊಂದು ಮಿನರಲ್ ವಾಟರ್ ಘಟಕವನ್ನೂ ಆರಂಭಿಸಿದ್ದರು. ಮಾರ್ಚ್ ಮಧ್ಯ ಭಾಗದ ತನಕವೂ ಎಲ್ಲವೂ ಸರಿಯಾಗಿ ಇತ್ತು. ಮಾರ್ಚ್ನಲ್ಲಿ ಕೊರೊನಾ ವೈರಸ್ ಕೇರಳಕ್ಕೆ ಕಾಲಿಟ್ಟು ಲಾಕ್ ಡೌನ್ ಘೋಷಣೆಯಾದ ಬಳಿಕ ಅನೇಕ ಮಂದಿಯ ಬದುಕು ಮೂರಾಬಟ್ಟೆಯಾಯಿತು. ಈ ಪೈಕಿ ಅಜಯನ್ ಕೂಡ ಒಬ್ಬರು. ಎರಡು ತಿಂಗಳು ಪೂರ್ತಿಯಾಗಿ ಬಸ್ಗಳು ರಸ್ತೆಗಿಳಿಯಲಿಲ್ಲ. ಮೇ ಕೊನೆ ವಾರದಲ್ಲಿ ಜನರ ಒತ್ತಾಯಕ್ಕೆ ಮಣಿದು ಅಜಯನ್ ಎರಡು ಬಸ್ ಗಳನ್ನು ರಸ್ತೆಗಿಳಿಸಿದರು.ಎರಡನೇ ದಿನ ಮಹಿಳೆಯೊಬ್ಬರು ಬಸ್ಸಿನಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ತಕರಾರು ತೆಗೆದು ದೂರು ನೀಡಿದರು. ಅಧಿಕಾರಿಗಳು 4,000 ರೂ. ದಂಡ ಹಾಕಿದರು. ಅಂದು ಇಡೀ ದಿನ ಬಸ್ಗೆ ಆದ ಕಲೆಕ್ಷನ್ 1,200 ರೂ. ಮಾತ್ರ!
ಈ ಘಟನೆಯ ಬಳಿಕ ಅಜಯನ್ ಬಸ್ಗಳನ್ನು ಓಡಿಸಲಿಲ್ಲ. ಕೈಯಲ್ಲಿದ್ದ ದುಡ್ಡೆಲ್ಲ ಖಾಲಿ ಆದ ಬಳಿಕ ಮನೆಯಲ್ಲಿ ಅಕ್ಕಿಗೂ ಗತಿ ಇಲ್ಲ ಎಂಬ ಪರಿಸ್ಥಿತಿ ಉಂಟಾದಾಗ ಅಜಯನ್ ಮಂಚೇರಿಯಲ್ಲೇ ಇರುವ ಒಂದು ಸರ್ವಿಸ್ ಸ್ಟೇಷನ್ನಲ್ಲಿ ವಾಹನಗಳನ್ನು ತೊಳೆಯುವ ನೌಕರಿಗೆ ಸೇರಿಕೊಂಡರು. ಹೀಗೆ ಆರು ಬಸ್ಗಳ ಮಾಲಕ, 18 ಮಂದಿಗೆ ನೌಕರಿ ಕೊಟ್ಟಿದ್ದ ಬಾಸ್ನನ್ನು ಕೊರೊನಾ ವಾಹನ ತೊಳೆಯುವ ನೌಕರನಾಗಿಸಿತು.
ಕತೆ ಇಷ್ಟಕ್ಕೆ ಮುಗಿಯಲಿಲ್ಲ. ಒಂದು ದಿನ ಬೈಕ್ನಲ್ಲಿ ಹೋಗಿ ಮೀನು ಮಾರಿ ಜೀವನ ದೂಡುವ ವ್ಯಕ್ತಿ ಈ ಸರ್ವಿಸ್ ಸ್ಟೇಷನ್ಗೆ ಬಂದರು. ಅವರು ಬೈಕ್ ಸರ್ವಿಸ್ ಮಾಡಲು ಬಂದಿರಲಿಲ್ಲ್ಲ. ಅಲ್ಲಿ ವಾಹನಗಳನ್ನು ತೊಳೆಯುತ್ತಿದ್ದ ಅಜಯನ್ ಅವರನ್ನು ನೋಡಲು ಬಂದಿದ್ದರು. ಅವರು ಬೇರೆ ಯಾರೂ ಅಲ್ಲ ಅಜಯನ್ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದವರು. ಹೀಗೆ ಅಜಯನ್ ಕೈಕೆಳಗೆ ನೌಕರಿ ಮಾಡಿಕೊಂಡಿದ್ದವರೆಲ್ಲ ದನ ಸಾಕಿಕೊಂಡು, ತರಕಾರಿ ಮಾರಿ, ಗೂಡಂಗಡಿ ಇಟ್ಟುಕೊಂಡು ದಿನದೂಡುತ್ತಿದ್ದಾರೆ.