ಹೆಬ್ರಿ : ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಹುತ್ತುರ್ಕೆ ಬಳಿ
ಆ. 7ರಂದು ನಡೆದಿದೆ. ಅಜೆಕಾರು ಮಧು ಎಲೆಕ್ಟ್ರಿಕಲ್ ಮಾಲಕ ಸಂತೆಕಟ್ಟೆಯ ಸದಾನಂದ ನಾಯಕ್ (55) ಮೃತ ದುರ್ದೈವಿ.
ಕಾರು ಹೆಬ್ರಿಯಿಂದ ಬ್ರಹ್ಮಾವರದ ಕಡೆಗೆ ಸಂಚರಿಸುತ್ತಿದ್ದು, ಬೃಹತ್ ಗಾತ್ರದ ಮರ ಏಕಾಏಕಿ ಬೇರು ಸಮೇತ ರಸ್ತೆಗೆ ಉರುಳಿಬಿದ್ದಿದೆ. ಅದರೊಂದಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳೂ ಕಾರಿನ ಮೇಲೆ ಬಿದ್ದಿವೆ. ಪರಿಣಾಮ ಕಾರು ಮರ, ವಿದ್ಯುತ್ ಕಂಬ ಮತ್ತು ತಂತಿಗಳ ಅಡಿಯಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿದ್ದು, ಚಾಲಕ ಸದಾನಂದ ನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮರವನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಮೃತದೇಹವನ್ನು ಹೊರಗಡೆ ತೆಗೆಯಲು ಹರಸಹಾಸ ಪಡಲಾಯಿತು.
















