ರಾಹುಲ್ ಗಾಂಧಿ ಬಂಧನ ಹಾಗೂ ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡನೀಯ

ಕಾರ್ಕಳ : ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಸರಕಾರಿ ಪ್ರಾಯೋಜಿತ ಹಿಂಸಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ಪ್ರಮುಖ ನಾಯಕರನ್ನು ಕೇಂದ್ರ ಸರ್ಕಾರ ಬಂಧಿಸಿರುವುದು ಹೇಡಿತನದ ಕೃತ್ಯ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಪ್ರಯೋಗ, ಜಲಫಿರಂಗಿ ದಾಳಿ ಹಾಗೂ ಲಾಠಿಚಾರ್ಜ್ ನಡೆಸಿರುವುದು ಅತ್ಯಂತ ಖಂಡನೀಯ. ಇಂತಹ ಕ್ರಮಗಳು ಬ್ರಿಟಿಷರ ಆಡಳಿತವನ್ನು ನೆನಪಿಸುವಂತಿವೆ ಎಂದು ಅವರು ಹೇಳಿದ್ದಾರೆ.

ಸರ್ವಾಧಿಕಾರಿ ಧೋರಣೆ
ವಿದ್ಯಾರ್ಥಿಗಳೇ ದೇಶದ ಭವಿಷ್ಯ. ಅವರ ಭವಿಷ್ಯವನ್ನು ರಕ್ಷಿಸಿ, ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರವೇ ಬಲಪ್ರಯೋಗ ನಡೆಸಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ದೇಶದಾದ್ಯಂತ ಅನೇಕ ವಿದ್ಯಾರ್ಥಿಗಳು ಮಾನಸಿಕವಾಗಿ ತೊಂದರೆ ಅನುಭವಿಸಿದ್ದು, ಹಲವರು ಆತ್ಮಹತ್ಯೆಗೆ ಶರಣಾಗಿರುವ ವರದಿಗಳು ಬಂದಿವೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಬದಲು ಲಾಠಿ ಏಟು ನೀಡಿರುವುದು ಸರ್ಕಾರದ ಸಂವೇದನಾ ಶೂನ್ಯತೆಯನ್ನು ತೋರಿಸುತ್ತದೆ. ಇದೇ ವೇಳೆ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಬೇಡಿಕೆಗಳಿಗೂ ಕೇಂದ್ರ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲ. ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ನಾಯಕರನ್ನು ಬಂಧಿಸಿರುವುದು ಸರ್ವಾಧಿಕಾರಿ ಧೋರಣೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕ್ಷಮೆ ಯಾಚಿಸಬೇಕು
ದೇಶದ ಜನರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವುದು ವಿರೋಧ ಪಕ್ಷದ ನಾಯಕರ ಸಂವಿಧಾನಬದ್ಧ ಕರ್ತವ್ಯವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕನ ಹುದ್ದೆ ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಾನ್ವಿತ ಸ್ಥಾನವಾಗಿದೆ. ವಿಪಕ್ಷ ನಾಯಕನನ್ನು ಛಾಯಾ ಪ್ರಧಾನಿ ಎನ್ನಲಾಗುತ್ತದೆ, ಅಂತಹ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ. ರಾಹುಲ್ ಗಾಂಧಿಯವರ ಬಂಧನವು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ರಾಹುಲ್ ಗಾಂಧಿಯವರ ಬಂಧನಕ್ಕೆ ಕ್ಷಮೆ ಯಾಚಿಸಬೇಕು, ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಬಲಪ್ರಯೋಗದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶುಭದ ರಾವ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.





























error: Content is protected !!
Scroll to Top