ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ʼಇಂದಿರಾ ಆಹಾರ ಕಿಟ್ʼ ವಿತರಿಸಲು ಸಚಿವ ಸಂಪುಟ ನಿರ್ಧರಿಸಿದೆ. ಸದ್ಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆದರೆ, ಇನ್ನುಮುಂದೆ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಇತರ ಆಹಾರ ಸಾಮಗ್ರಿ ನೀಡಲಾಗುತ್ತದೆ. ಇಂದಿರಾ ಆಹಾರ ಕಿಟ್‌ನಲ್ಲಿ ತೊಗರಿ ಬೇಳೆ, ಹೆಸರು ಕಾಳು, ಸಕ್ಕರೆ, ಉಪ್ಪು ತಲಾ 1 ಕೆಜಿ ಹಾಗೂ 1 ಲೀಟರ್ ಅಡುಗೆ ಎಣ್ಣೆ ಇರಲಿದೆ.
ಈ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ಅನ್ನಭಾಗ್ಯದ ಅಕ್ಕಿ ದುರ್ಬಳಕೆ ತಡೆಯಲು ಇಂದಿರಾ ಆಹಾರ ಕಿಟ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಆಯವ್ಯಯದಲ್ಲಿ ಹಂಚಿಕೆ ಮಾಡಿರುವ 6,426 ಕೋಟಿ ರೂ.ಗಳಲ್ಲಿ 6,119.52 ಕೋಟಿ ರೂ. ವಚ್ಚದಲ್ಲಿ ಇಂದಿರಾ ಆಹಾರ ಕಿಟ್ ಅನ್ನು ಒದಗಿಸಲು ಬಜೆಟ್ ಮರುಹಂಚಿಕೆ ಮಾಡುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.








