ಹಿರ್ಗಾನದಲ್ಲಿ ದನ ಕಳ್ಳತನಗೈದು ಮಾಂಸ ಮಾಡಿದ ಪ್ರಕರಣ – ಇಬ್ಬರು ಅರೆಸ್ಟ್

ಕಾರ್ಕಳ : ಹಿರ್ಗಾನ ಗ್ರಾಮದ ತುಂಬೆಹಿತ್ಲು ಎಂಬಲ್ಲಿ ಮೇಯಲು ಬಿಟ್ಟ ದನವನ್ನು ಕಳ್ಳತನಗೈದು ಮಾಂಸ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಅ. 3 ರಂದು ಹಿರ್ಗಾನ ಗ್ರಾಮದ ದಿವಾಕರ ಆಚಾರ್ಯ ಎಂಬವರಿಗೆ ಸೇರಿದ 35 ಸಾವಿರ ರೂ. ಮೌಲ್ಯದ ಗೀರ್ ತಳಿಯ ದನವನ್ನು ಮೇಯಲು ಬಿಟ್ಟಿದ್ದು ದನ ವಾಪಾಸ್‌ ಮನೆಗೆ ಬಂದಿರಲಿಲ್ಲ. ಅ. 5ರಂದು ಬೆಳಿಗ್ಗೆ ಹುಡುಕಾಡಿದಾಗ ಸಮೀಪದ ಎಡ್ವಿನ್ ಎಂಬವರ ಮನೆಯ ಬಳಿಯ ಹಾಡಿಯಲ್ಲಿ ದನದ ಕಳೇಬರ ದೊರೆತಿದೆ.
ದಿವಾಕರ ಆಚಾರ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕಾರ್ಕಳ ನಗರ ಠಾಣೆಯ ಎಸ್‌ಐಗಳಾದ ಮುರಳೀಧರ ನಾಯ್ಕ್‌ ಹಾಗೂ ಶಿವಕುಮಾರ್ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದರು. ಕಾರ್ಕಳ ಉಪವಿಭಾಗದ ASP ಡಾ. ಹರ್ಷಾ ಪ್ರಿಯಂವಧ ಅವರ ಮಾರ್ಗದರ್ಶನದಲ್ಲಿ CPI ಮಂಜಪ್ಪರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವ ಮೂಲಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಹಿರ್ಗಾನ ಗ್ರಾಮದ ತುಂಬೆಹಿತ್ಲು ನಿವಾಸಿ ಎಡ್ವಿನ್ ಡಿಸೋಜ (61), ಅದೇ ಗ್ರಾಮದ ಗೋಕುಲ್ ಕಾಂಪೌಂಡ್ ಅಲ್ತಾಫ್ ಹುಸೇನ್ (52) ಎಂಬುವರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಕರಣದ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.































error: Content is protected !!
Scroll to Top