ಗೆಳೆಯನಿಂದಲೇ‌ ನವೀನ್‌ ಪೂಜಾರಿ ಹತ್ಯೆ – ಆರೋಪಿ ವಶಕ್ಕೆ

ಕಾರ್ಕಳ‌ : ಕುಂಟಲ್ಪಾಡಿಯಲ್ಲಿ ನವೀನ್‌ ಪೂಜಾರಿಯನ್ನು ಆತನ ಗೆಳೆಯನೇ ಕೊಲೆಗೈದಿರುವುದಾಗಿ ತನಿಖೆಯಿಂದ ಬಹಿರಂಗವಾಗಿದೆ. ಪದ್ಮಾಂಬಿಕಾ ಬಸ್‌ ಚಾಲಕ, ಬೆಳ್ತಂಗಡಿ ಮೂಲದ ಪರೀಕ್ಷಿತ್‌ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸೋಮವಾರ ರಾತ್ರಿ ನವೀನ್‌ ಹಾಗೂ ಪರೀಕ್ಷಿತ್‌ ದೂಪದಕಟ್ಟೆಯಲ್ಲಿರುವ ಬಾರ್‌ನಲ್ಲಿ ಮದ್ಯಪಾನ ಮಾಡಿರುತ್ತಾರೆ. ಈ ವೇಳೆ ಪರೀಕ್ಷಿತ್‌ ಹಾಗೂ ನವೀನ್‌ ಮಧ್ಯೆ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವಾಗಿದೆ. ಬಳಿಕ ಇಬ್ಬರೂ ಬಾರ್‌ನಿಂದ ತೆರಳಿರುತ್ತಾರೆ. ಕೆಲ ಗಂಟೆಗಳ ಬಳಿಕ ನವೀನ್‌ ಪರೀಕ್ಷಿತ್‌ಗೆ ಕರೆ ಮಾಡಿ ಆನೆಕೆರೆಯಲ್ಲಿನ ಬಾರ್‌ಗೆ ಬರುವಂತೆ ತಿಳಿಸಿದ್ದು, ಅಂತೆಯೇ ಪರೀಕ್ಷಿತ್‌ ಅಲ್ಲಿಗಾಗಮಿಸಿರುತ್ತಾನೆ. ಈ ವೇಳೆ ತನ್ನ ಸೇಪ್ಟಿಗೆಂದು ಚೂರಿಯನ್ನೂ ಪರೀಕ್ಷಿತ್‌ ಇರಿಸಿಕೊಂಡಿರುತ್ತಾನೆ. ಅವರಿಬ್ಬರ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದ್ದು ಬಳಿಕ ಬಾರ್‌ನಿಂದ ಹೊರಬಂದಿರುತ್ತಾರೆ. ಕುಂಟಲ್ಪಾಡಿ ಎಂಬಲ್ಲಿಗೆ ತಲುಪುವಾಗ ತನ್ನಲ್ಲಿದ್ದ ಚೂರಿಯಿಂದ ಪರೀಕ್ಷಿತ್‌ ನವೀನ್‌ ಅವರ ಬೆನ್ನು, ಹೊಟ್ಟೆ, ತೋಳಿನ ಭಾಗಕ್ಕೆ ಇರಿದು ಬಳಿಕ ಪರಾರಿಯಾಗಿರುತ್ತಾನೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನವೀನ್‌ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿ, ಒದ್ದಾಡಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಸ್‌ ಚಾಲಕ
ಮೂಲತಃ ಮಂಗಳೂರಿನ ಪಡೀಲ್‌ನವರಾಗಿರುವ ನವೀನ್‌ ಪೂಜಾರಿ, ಕಾರ್ಕಳ ಬಾಲಾಜಿ ಆರ್ಕೇಡ್‌ನಲ್ಲಿ ವಾಸವಾಗಿದ್ದರು. ಈ ಹಿಂದೆ ಬಸ್ ಚಾಲಕರಾಗಿದ್ದ ಅವರು ಬಳಿಕ ಲಾರಿ ಸೇರಿದರು. ಇತ್ತೀಚೆಗೆ ಬದಲಿಯಾಗಿ ಮಾತ್ರ ಚಾಲಕರಾಗಿ ಹೋಗುತ್ತಿದ್ದರು ಮತ್ತು ಇದರೊಂದಿಗೆ ಬಡ್ಡಿ ವ್ಯವಹಾರವನ್ನು ನಡೆಸಿಕೊಂಡಿದ್ದರು. ನವೀನ್‌ ಅವರ ಪತ್ನಿ ಮತ್ತು ಮಕ್ಕಳು ಮಂಗಳೂರಿನಲ್ಲಿ ನೆಲೆಸಿದ್ದು, ನವೀನ್‌ ಮಾತ್ರ ಕಾರ್ಕಳದಲ್ಲೇ ವಾಸವಾಗಿದ್ದರು.

ಉಡುಪಿ ಎಸ್‌ಪಿ ಹರಿರಾಂ ಶಂಕರ್‌, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಾವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್ಐ ಮುರಳೀಧರ್‌ ನಾಯ್ಕ್,‌ ಗ್ರಾಮಾಂತರ ಠಾಣೆ ಎಸ್ಐ ಪ್ರಸನ್ನ ಎಂ.ಎಸ್., ಸೋಕೊ ತಂಡ, ಬೆರಳಚ್ಚು ತಂಡ ಹಾಗೂ ಶ್ವಾನ ದಳ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.





































error: Content is protected !!
Scroll to Top