ಟಿಆರ್‌ಎಫ್‌ನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

ದೆಹಲಿ : ಪಹಲ್ಗಾಮ್‌ ಉಗ್ರರ ದಾಳಿಯ ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಯನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರ್ಪಡೆ ಮಾಡಿದೆ. ಆ ಮೂಲಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಅಲ್ಲದೇ ಭಾರತಕ್ಕೆ ಬಹುದೊಡ್ಡ ಜಯ ಇದಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಈ ಬಗ್ಗೆ ಮಾಹಿತಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ. ಪಹಲ್ಗಾಮ್‌ ದಾಳಿಯಲ್ಲಿ ಬಲಿಯಾದ ಅಮಾಯಕರಿಗೆ ನ್ಯಾಯ ಒದಗಿಸಲು ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಸರಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.

ಇಂದು ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂದು ಹೆಸರಿಸುತ್ತದೆ. ಲಷ್ಕರ್-ಎ-ತಯ್ಯಿಬಾ (LeT) ಸಂಸ್ಥೆಯ ಭಾಗವಾಗಿರುರುವ ಟಿಆರ್‌ಎಫ್‌ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. 2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಹಲವಾರು ದಾಳಿಯ ಹೊಣೆಯನ್ನು ಟಿಆರ್‌ಎಫ್‌ ಹೊತ್ತುಕೊಂಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.





















error: Content is protected !!
Scroll to Top