ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯ ಜಾಮೀನಿನ ವಿಧಿ ವಿಧಾನಗಳು

ನ್ಯಾಯಶಾಸ್ತ್ರ ಪ್ರಪಂಚದಲ್ಲಿ ಜಾಮೀನು ಎಂಬುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳ ಪೈಕಿ ಒಂದಾಗಿರುತ್ತದೆ. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಪೋಲಿಸರು ಬಂಧಿಸಿದಾಗ ಯಾವ ಕಾರಣಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಪೋಲೀಸರಿಂದ ಪಡೆಯುವ ಹಾಗೂ ಪೋಲೀಸರ ನೆರವಿನೊಂದಿಗೆ ದೂರವಾಣಿ ಮುಖಾಂತರ ತನ್ನ ಮನೆಯವರೊಂದಿಗೆ ಸಂಪರ್ಕಿಸಿ ಮಾತನಾಡುವ ಸಾಂವಿಧಾನಿಕ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯು ಭಾರತ ಸಂವಿಧಾನದ ಅನುಚ್ಛೇದ 22(1) ರ ಪ್ರಕಾರ ಹೊಂದಿರುತ್ತಾನೆ. ನೂರು ಜನ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುವುದು ನ್ಯಾಯ ವಿತರಣಾ ವ್ಯವಸ್ಥೆಯ ಮುಖ್ಯ ಉದ್ಧೇಶವಾಗಿರುತ್ತದೆ. ಹೀಗಾಗಿ ಕ್ರಿಮಿನಲ್ ಪ್ರಕರಣದ ಆರೋಪವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಆತನ ಮೇಲಿನ ಆರೋಪವು ಸಾಬೀತು ಆಗುವ ತನಕ ಆತನನ್ನು ಮುಗ್ಧ ಹಾಗೂ ಅಮಾಯಕ ವ್ಯಕ್ತಿ ಎಂಬುದಾಗಿ ಪರಿಗಣಿಸಬೇಕಾಗಿರುವುದು ನ್ಯಾಯಶಾಸ್ತ್ರದ ತತ್ವವಾಗಿರುತ್ತದೆ. ಸಾಮಾನ್ಯವಾಗಿ ಎರಡು ವಿಧದ ಅಪರಾಧಗಳಿರುತ್ತವೆ.

ಮೊದಲನೆಯದಾಗಿ ಜಾಮೀನೀಯ (ಬೈಲೇಬಲ್) ಅಪರಾಧ, ಎರಡನೆಯದಾಗಿ ಜಾಮೀನೀಯವಲ್ಲದ (ನಾನ್ ಬೈಲೇಬಲ್) ಅಪರಾಧ. ಜಾಮೀನೀಯ ಅಪರಾಧಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಪೋಲೀಸ್ ಠಾಣೆಯ ಅಧಿಕಾರಿಯು ವಾರಂಟ್ ಇಲ್ಲದೆ ದಸ್ತಗಿರಿ ಮಾಡಬಹುದು. ಆದರೆ ಇಂತಹ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯು ಜಾಮೀನನ್ನು ಪಡೆಯುವ ಕಾನೂನು ಬದ್ಧವಾದ ಹಕ್ಕನ್ನು ಹೊಂದಿರುತ್ತಾನೆ. ಜಾಮೀನೀಯ ಅಪರಾಧದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಪೋಲೀಸರು ಜಾಮೀನಿನ ಆಧಾರದಲ್ಲಿ ಠಾಣೆಯಲ್ಲಿಯೇ ಬಿಡುಗಡೆಗೊಳಿಸಬಹುದಾಗಿದೆ. ಆ ನಂತರ ಆತ ನ್ಯಾಯಲಯದ ಮುಂದೆ ಹಾಜರಾಗಿ ತನ್ನ ನಿರಪರಾಧಿತನವನ್ನು ಸಾಬೀತುಪಡಿಸಬಹುದಾಗಿದೆ. ಒಂದು ವೇಳೆ ಆತನನ್ನು ಪೋಲೀಸರು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ಸಹ ನ್ಯಾಯಾಲಯವು ಆತನಿಂದ ಮುಚ್ಚಳಿಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿದೆ. ಆದರೆ ಬಂಧಿಸಲ್ಪಟ್ಟ ವ್ಯಕ್ತಿಯ ಮೇಲಿನ ಆರೋಪವು ಜಾಮೀನೀಯವಲ್ಲದ (ನಾನ್ ಬೈಲೇಬಲ್) ಅಪರಾಧದ ಸ್ವರೂಪವನ್ನು ಹೊಂದಿದಲ್ಲಿ ಆತನನ್ನು ನೇರವಾಗಿ ಜಾಮೀನಿನ ಮೇಲೆ ಬಿಡುಗಡೆ ಗೊಳಿಸುವ ಹಕ್ಕನ್ನು ಪೋಲೀಸ್ ಅಧಿಕಾರಿ ಹೊಂದಿರುವುದಿಲ್ಲ. ಈ ಸಂದರ್ಭದಲ್ಲಿ ಪೋಲೀಸರು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಆತನ ಮೇಲಿನ ಅಪರಾಧದ ಸ್ವರೂಪ, ಆತನ ಹಿನ್ನಲೆ ಮತ್ತು ಆತನ ಮೇಲಿನ ಅಪರಾಧಕ್ಕೆ ಸಂಬಂಧಪಟ್ಟಂತೆ ವಿಚಾರಣೆಯ ಸಂದರ್ಭದಲ್ಲಿ ಆತ ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುವ ಸಾಧ್ಯತೆ ಬಗ್ಗೆ ಪರಿಶೀಲಿಸಿ, ಆತ ನ್ಯಾಯಾಲಯಕ್ಕೆ ವಿಚಾರಣೆ ಸಮಯದಲ್ಲಿ ಸರಿಯಾಗಿ ಹಾಜರಾಗಿ ತನಿಖೆಗೆ ಸಹಕರಿಸುವ ಮತ್ತು ಪ್ರಕರಣದ ತನಿಖೆಯ ವಿಚಾರಣೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಬಾರದಾಗಿ ಇತ್ಯಾದಿ ಷರತ್ತಿನೊಂದಿಗೆ ಆತನ ಮತ್ತು ಜಾಮೀನುದಾರರ ಸೂಕ್ತ ಮುಚ್ಚಳಿಕೆ ಪಡೆದು ನ್ಯಾಯಾಲಯವು ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಬಹುದಾಗಿದೆ

ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣದಲ್ಲಿನ ಆರೋಪಿತ ವ್ಯಕ್ತಿಗೆ ಜಾಮೀನಿನ ನಿರಾಕರಣೆ ಮಾಡುವ ಬದಲು ಜಾಮೀನು ನೀಡುವುದೇ ಕಾನೂನಿನ ಸಾಮಾನ್ಯ ನೀತಿಯಾಗಿರುತ್ತದೆ. ಶಿಕ್ಷೆಯ ಭಾಗವಾಗಿ ಜಾಮೀನನ್ನು ತಡೆಯಕೂಡದು ಎಂಬುವುದು ಕಾನೂನಿನ ನಿಯಮವಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ಒಂದು ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ನಡೆಸಲು ಕ್ಷೇತ್ರ ವ್ಯಾಪ್ತಿಯ ಅಧಿಕಾರ ಹೊಂದಿರದ ನ್ಯಾಯಾಲಯಕ್ಕೆ ಬಂಧಿತ ಆರೋಪಿಗೆ ಜಾಮೀನು ನೀಡುವ ಅಧಿಕಾರ ಇರುವುದಿಲ್ಲ.

































































































error: Content is protected !!
Scroll to Top