ಕಾಂಗ್ರೆಸ್‌ನ ರಾಮ ವಿರೋಧಿ ಮುಖ ದೇಶದ ಮುಂದಿದೆ : ರಾಮ ಮಂದಿರ ಆಹ್ವಾನ ನಿರಾಕರಿಸಿದ್ದಕ್ಕೆ ಬಿಜೆಪಿ ವಾಗ್ದಾಳಿ

ದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮಾರಂಭರಕ್ಕೆ ಹಾಜರಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಆಮಂತ್ರಣ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್‌ನ ರಾಮ ವಿರೋಧಿ ಮುಖ ಕಾಣುತ್ತಿದೆ ಎಂದು ಹೇಳಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಮಾರಂಭದ ಆಹ್ವಾನವನ್ನು ಖರ್ಗೆ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಿರಸ್ಕರಿಸಿದ್ದು, ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕ್ರಮ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ ನಿರ್ಧಾರಕ್ಕೆ ಬಿಜೆಪಿ ವಾಗ್ದಾಳಿ
ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ವಿರೋಧ ಪಕ್ಷವಾದ ಇಂಡಿಯಾ ನಾಯಕರು ಯಾವಾಗಲೂ ಸನಾತನ ಧರ್ಮವನ್ನು ವಿರೋಧಿಸುತ್ತಿದ್ದಾರೆ. ಅವರ ಆಹ್ವಾನವನ್ನು ನಿರಾಕರಿಸುವುದು ಸನಾತನದ ಮೇಲಿನ ದ್ವೇಷಕ್ಕೆ ಅನುಗುಣವಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಈ ಹಿಂದೆ ಭಗವಾನ್ ರಾಮನ ಅಸ್ತಿತ್ವವನ್ನು ನಿರಾಕರಿಸುವ ದಾಖಲೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿತ್ತು. ಈಗ ಅವರು ಪ್ರಾಣಪ್ರತಿಷ್ಠಾ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರಕ್ಕಾಗಿ ಭಾರತದ ಜನರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಲಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಕಾಂಗ್ರೆಸ್ ನಿಲುವಿನಲ್ಲಿ ಹೊಸದೇನೂ ಇಲ್ಲ, ಅವರು ಯಾವಾಗಲೂ ಶ್ರೀ ರಾಮನನ್ನು ವಿರೋಧಿಸುತ್ತಾರೆ ಎಂದು ಠಾಕೂರ್ ಹೇಳಿದ್ದಾರೆ.

ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು ಬೃಹತ್ ಧಾರ್ಮಿಕ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು, ವಿರೋಧ ಪಕ್ಷದ ನಡೆ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದರು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಳೆದ ಕೆಲವು ದಶಕಗಳಿಂದ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಸಂಸದ ಮನೋಜ್ ತಿವಾರಿ ಕೂಡ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮನ ಅಸ್ತಿತ್ವವನ್ನು ನಿರಾಕರಿಸಿದ ಮತ್ತು ಅಯೋಧ್ಯೆಯ ಮಂದಿರ ನಿರ್ಮಾಣ ವಿಳಂಬಗೊಳಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದವರನ್ನು ಸಹ ರಾಮಮಂದಿರ ಪ್ರಾಣ ಪ್ರತಿಷ್ಠಾಕ್ಕೆ ಆಹ್ವಾನಿಸಲಾಗುತ್ತಿದೆ. ಇದು ನನ್ನ ಪಾಲಿಗೆ ತ್ರೇತಾ ಯುಗದ ಮರಳುವಿಕೆ ಎಂದಿದ್ದಾರೆ.



































































































error: Content is protected !!
Scroll to Top