ಇಂಫಾಲ : ಮಣಿಪುರದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅದೇ ಸಮಯದಲ್ಲಿ ನಾಲ್ವರು ನಾಪತ್ತೆಯಾಗಿದ್ದು ಪೊಲೀಸರು ಅವರಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಮಾಹಿತಿ ಪ್ರಕಾರ, ಕುಂಬಿ ವಿಧಾನಸಭಾ ಕ್ಷೇತ್ರದ ನಾಲ್ವರು ಬಿಷ್ಣುಪುರ ಮತ್ತು ಚುರಚಂದಪುರ ಜಿಲ್ಲೆಗಳ ಪಕ್ಕದ ಬೆಟ್ಟಗಳ ಬಳಿ ಮರ ಸಂಗ್ರಹಿಸಲು ಹೋಗಿದ್ದ ನಾಲ್ವರು ಹಿಂತಿರುಗಿಲ್ಲ. ನಾಪತ್ತೆಯಾಗಿರುವವರನ್ನು ದಾರಾ ಸಿಂಗ್, ಇಬೊಮ್ಚಾ ಸಿಂಗ್, ರೊಮೈನ್ ಸಿಂಗ್ ಮತ್ತು ಆನಂದ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಭಯೋತ್ಪಾದಕರ ವಶದಲ್ಲಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಮತ್ತು ಕೇಂದ್ರ ಪಡೆಗಳಿಂದ ಸಹಾಯವನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರರು ಗುಂಡಿನ ದಾಳಿ ನಡೆಸಿದ್ದು, ಬಿಷ್ಣುಪುರ್ ಜಿಲ್ಲೆಯ ಹಾತಕ್ ಗ್ರಾಮದಲ್ಲಿ ಬಾಂಬ್ ದಾಳಿ ನಡೆದಿದೆ. 100ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದರು. ಯಾರೂ ಗಾಯಗೊಂಡಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.

























