ಕಾರ್ಕಳದಲ್ಲಿ ಪತ್ರಕರ್ತನಿಗೆ ನುಡಿನಮನ
ಕಾರ್ಕಳ : ಶೇಖರ್ ಅಜೆಕಾರ್ ನಿಧನ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಆಗಿರುವ ದೊಡ್ಡ ನಷ್ಟ. ಹಿಂದಿನ ದಿನವಷ್ಟೇ ಸಾಹಿತ್ಯ ಕ್ಷೇತ್ರದಲ್ಲಿ ಮಾಡಬೇಕಾದ ಹಲವಾರು ಕೆಲಸಗಳ ಬಗ್ಗೆ ನನ್ನೊಂದಿಗೆ ವಿಚಾರ ವಿನಿಮಯ ಮಾಡಿದ್ದರು. ಮಾರನೇ ದಿನ ಬೆಳಗ್ಗೆ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂಬ ಸುದ್ದಿ ಬಂದಾಗ ನಂಬಲು ಸಾಧ್ಯವಾಗದೆ ದಿಗ್ಭ್ರಾಂತನಾದೆ. ಓರ್ವ ಸಹೃದಯ ಗೆಳೆಯ ಹಾಗೂ ಸಂವೇದನಾಶೀಲ ಪತ್ರಕರ್ತನನ್ನು ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ ಎಂದು ಹಿರಿಯ ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಕೆಲ ದಿನಗಳ ಹಿಂದೆ ನಿಧನರಾದ ಪತ್ರಕರ್ತ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಸೋಮವಾರ ಕಾರ್ಕಳದ ಹೋಟೆಲ್ ಪ್ರಕಾಶ್ನಲ್ಲಿ ನಡೆದ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಪತ್ರಿಕಾರಂಗಕ್ಕೆ ಸರಕಾರದ ಸವಲತ್ತುಗಳು ಇಲ್ಲದೇ ಇರುವುದು ದೊಡ್ಡ ಹಿನ್ನಡೆ. ಜೀವನವಿಡೀ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುವ ಪತ್ರಕರ್ತರು ಮಾತ್ರ ಯಾವುದೇ ಆರ್ಥಿಕ ಭದ್ರತೆ ಇಲ್ಲದೆ ಬದುಕುತ್ತಿರುವುದು ವಿಪರ್ಯಾಸ. ಪತ್ರಕರ್ತರ ಬದುಕಿಗೆ ಭದ್ರತೆ ನೀಡುವ ಸಲುವಾಗಿ ಸರಕಾರ ಯೋಜನೆಗಳನ್ನು ರೂಪಿಸಬೇಕು. ಎಲ್ಲ ಪತ್ರಕರ್ತರಿಗೂ ಘನತೆಯ ಬದುಕು ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಪತ್ರಕರ್ತ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಶೇಖರ್ ಅಜೆಕಾರ್ ನನ್ನ ಶಿಷ್ಯನೂ ಹೌದು. ಅವರಿಗೆ ಆರಂಭದಲ್ಲಿ ಬದುಕು ಕಟ್ಟಿಕೊಳ್ಳಲು ಸಹಕರಿಸಿದವನು ನಾನು. ನಮ್ಮಿಬ್ಬರದು ಅನ್ಯೋನ್ಯವಾದ ಸಂಬಂಧ. ಕಾರ್ಕಳದ ಇತಿಹಾಸದಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದಂಥ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿ ಹೆಸರುವಾಸಿಯಾದವರು ಅವರು.
ಆದರೆ ಪತ್ರಕರ್ತರ ಬದುಕು ಅದೆಷ್ಟು ಅಭದ್ರ ಎನ್ನುವುದು ಶೇಖರ ಅಜೆಕಾರು ಬದುಕನ್ನು ನೋಡಿದಾಗ ಅರಿವಾಗುತ್ತದೆ. ಪತ್ರಕರ್ತರು ಕೇವಲ ಸಮಾಜಕ್ಕಾಗಿ ಬದುಕದೆ ಅವರಿಗಾಗಿಯೂ ಬದುಕು. ತಮ್ಮ ಕುಟುಂಬ ಪರಿವಾರದವರಿಗಾಗಿ ಬದುಕಬೇಕು. ನಿಮ್ಮ ಜೀವನದ ಬಗ್ಗೆಯೂ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು. ಶೇಖರ ಅಜೆಕಾರು ತನ್ನ ವಯಕ್ತಿಕ ಬದುಕನ್ನು ಬದಿಗಿಟ್ಟು, ಸಾಹಿತ್ಯ, ಸಾಮಾಜಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಕಾರ್ಕಳ ಇತಿಹಾಸದಲ್ಲಿ ಬೆಳದಿಂಗಳ ಸಾಹಿತ್ಯೋತ್ಸವವನ್ನು ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ವಿನೂತನ ಕಲ್ಪನೆಯನ್ನು ಬರೆದವರು ಶೇಖರ್ ಅಜೆಕಾರ್ ಎಂದರು.

ಆರ್ಥಿಕ ಸಹಕಾರ
ಶೇಖರ್ ಅಜೆಕಾರ್ ಕುಟುಂಬಕ್ಕೆ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ರೂ. 50,000/- ನೆರವು ನೀಡಿದ್ದು, ಅವರ ಪರವಾಗಿ ಸಂಸ್ಥೆಯ ಪಿಆರ್ಒ ಜ್ಯೋತಿ ಪದ್ಮನಾಭ ಬಂಡಿ ಚೆಕ್ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಶೇಖರ್ ಅಜೆಕಾರ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದವರು. ಅವರ ಮನೆಗೆ ಭೇಟಿ ನೀಡಿದಾಗ ಮನೆಯಲ್ಲಿ 3,000ಕ್ಕಿಂತಲೂ ಅಧಿಕ ಪುಸ್ತಕಗಳನ್ನು ನೋಡಿ ಬಹಳ ಆಶ್ಚರ್ಯವಾಯಿತು. 28 ಪುಸ್ತಕಗಳನ್ನು ಶೇಖರ್ ಅಜೆಕಾರ್ ಬರೆದಿರುವುದು ಒಬ್ಬ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸ್ಮರಿಸಿದರು. ಪತ್ರಿಕಾ ರಂಗದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ, ಗ್ರಾಮೀಣ ಮಟ್ಟದ ಸಾಧಕರನ್ನು ಅಪಾರ ಸಂಖ್ಯೆಯಲ್ಲಿ ಗುರುತಿಸಿರುವವರು ಶೇಖರ್ ಅಜೆಕಾರ್ ಎಂದರು. ಕಾರ್ಯಕ್ರಮದಲ್ಲಿ ದಾನಿಗಳಿಂದ ಸಂಗ್ರಹವಾದ ರೂ. 2ಲಕ್ಷ ಧನಸಹಾಯವನ್ನು ಶೇಖರ್ ಅಜೆಕಾರು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸಹೃದಯಿಗಳ ಸಹಕಾರವು ಇವರ ಕುಟುಂಬಕ್ಕೆ ಇದ್ದು, ಹೆಚ್ಚಿನ ಆರ್ಥಿಕ ನೆರವನ್ನು ನೀಡಲಿಚ್ಛಿಸುವವರು ಈ ಕೆಳಗಿನ ಅಕೌಂಟ್ಗೆ ಕಳುಹಿಸಿಕೊಡಬಹುದಾಗಿದೆ.
ತಾರಾ ಶೇಖರ್ ಅಜೆಕಾರು
A/C. 520101252280822
IFSC: UBIN0900982
BRANCH AJEKAR
M : 9611158493
ಈ ಸಂದರ್ಭದಲ್ಲಿ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ, ಕಸಾಪದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್, ಗಂಗಾಧರ ಫಣಿಯೂರು, ಸಾವಿತ್ರಮ್ಮ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶೇಖರ್ ಅಜೆಕಾರು ಅವರ ಅಭಿಮಾನಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು. ಮಾಧ್ಯಮಬಿಂಬ ಪತ್ರಿಕೆ ಸಂಪಾದಕ ವಸಂತ್ ಕುಮಾರ್ ಪ್ರಸ್ತಾವನೆ ಗೈದು, ಶಿಕ್ಷಕ ನಾಗೇಶ್ ನಲ್ಲೂರು ನಿರೂಪಿಸಿದರು.









































