ಕಾಂಗ್ರೆಸ್ಸನ್ನು ವಿಚಲಿತಗೊಳಿಸಿದ ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ರಹಸ್ಯ

ಹರಿಪ್ರಸಾದ್‌ ಬಹಿರಂಗಗೊಳಿಸಿದ ರಹಸ್ಯದಿಂದ ಸಿದ್ದರಾಮಯ್ಯ ಬಣಕ್ಕೆ ತೀವ್ರ ಮುಜುಗರ

ಬೆಂಗಳೂರು : ಅತಿ ಹಿಂದುಳಿದ ವರ್ಗದವರ ಸಭೆಯಲ್ಲಿ ಕಾಂಗ್ರೆಸ್‌ನ ಅತೃಪ್ತ ನಾಯಕ ಬಿ. ಕೆ. ಹರಿಪ್ರಸಾದ್‌ ಸಿಡಿಸಿದ ಬಾಂಬ್‌ ಈಗ ಕಾಂಗ್ರೆಸ್‌ನಲ್ಲಿ ತಳಮಳಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಈಗ ಹರಿಪ್ರಸಾದ್‌ ವಿರುದ್ಧ ಸಿಡಿದು ನಿಂತಿದ್ದು, ಅವರನ್ನು ಹಣಿಯಲು ತಂತ್ರ ಹೆಣೆಯುತ್ತಿದೆ.
ಹರಿಪ್ರಸಾದ್‌ ಹೇಳಿಕೆ ಸಿದ್ದರಾಮಯ್ಯನವರ ಜಂಘಾಬಲವನ್ನು ಗುಡುಗಿಸಿದ್ದು ಮಾತ್ರ ಸುಳ್ಳಲ್ಲ. ತಾನು ನಖಶಿಖಾಂತ ವಿರೋಧಿಸುತ್ತಿರುವ ಬಿಜೆಪಿಯನ್ನು ಸೇರಲು ಒಂದು ಕಾಲದಲ್ಲಿ ಸಿದ್ದರಾಮಯ್ಯ ಮುಂದಾಗಿದ್ದ ರಹಸ್ಯವನ್ನು ಹರಿಪ್ರಸಾದ್‌ ಭಾಷಣದ ವೇಳೆ ಬಹಿರಂಗಪಡಿಸಿದ್ದಾರೆ.

ಅಧಿಕಾರಕ್ಕಾಗಿ ಯಾರು ಎಲ್‌. ಕೆ. ಅಡ್ವಾಣಿ ಮನೆಗೆ ತೆರಳಿ ಉಪಹಾರ ಸೇವಿಸಿ ಬಿಜೆಪಿ ಸೇರುವ ಪ್ರಯತ್ನ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. 75 ಲಕ್ಷದ ವಾಚು ಕಟ್ಟಿಕೊಂಡು ಪಂಚೆ ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಟೀಕೆಗಳ ಸುರಿಮಳೆಗೈದಿದ್ದಾರೆ. ಇದರಿಂದ ಸಿದ್ದರಾಮಯ್ಯ ಬಣ ತೀರಾ ವಿಚಲಿತಗೊಂಡಿದ್ದು, ಹರಿಪ್ರಸಾದ್‌ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದೆ.

ಇವತ್ತು ಅರವಿಂದ್ ಲಿಂಬಾವಳಿ ಬದುಕಿದ್ದಾರೆ, ವೆಂಕಯ್ಯ ನಾಯ್ಡು ಇದ್ದಾರೆ, ಯಾರು ಬಿಜೆಪಿ ಬಾಗಿಲು ತಟ್ಟಿದ್ದರು ಎಂದು ಅವರನ್ನೇ ಕೇಳಿ ಎಂದು ಹರಿಪ್ರಸಾದ್ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿ. ಕೆ. ಹರಿಪ್ರಸಾದ್ ಬಾಂಬ್ ಸಿಡಿಸಿದ ಬೆನ್ನಲ್ಲೇ ಜೆಡಿಎಸ್ ಸಮಾವೇಶದಲ್ಲೂ ಸಿದ್ದರಾಮಯ್ಯನವರ ಬಿಜೆಪಿ ಸೇರುವ ಪ್ರಯತ್ನ ಮಾಹಿತಿ ಬಹಿರಂಗವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಆರೋಪ ನಿರಾಕರಿಸಿದ್ದಾರೆ. ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದಾರೆ.

ಬಿಜೆಪಿಗೆ ಹೋಗುವ ಪ್ರಯತ್ನ ಮಾಡಿರುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಿಎಂ, ನಾನು ಬಿಜೆಪಿಗೆ ಹೋಗುತ್ತೇನೆ ಅಂದ್ರೆ ಯಾರಾದರೂ ನಂಬುತ್ತಾರಾ? ಅಡ್ವಾಣಿ ಅವರನ್ನು ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿದೆ ಎಂದ ತಕ್ಷಣ ಬಿಜೆಪಿಗೆ ಸೇರಲು ಹೋಗಿದ್ದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಮೊನ್ನೆ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೆ, ಹಾಗೆಂದು ಬಿಜೆಪಿ ಜತೆ ಸೇರುತ್ತೇನೆಯೇ ಎಂದು ಕೇಳಿದ್ದಾರೆ.
ಕುಮಾರಸ್ವಾಮಿ ಯಾರೋ ಹೇಳಿದರು ಎಂದು ಏನನ್ನೋ ಹೇಳಿದ್ದಾರೆ. ನನ್ನ ರಾಜಕೀಯ ಜೀವನದುದ್ದಕ್ಕೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಎಂದೂ ಕೋಮುವಾದಿ ಪಕ್ಷದ ಜತೆ ಹೋಗುವುದಿಲ್ಲ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ. ನನ್ನ ಇಡೀ ರಾಜಕಾರಣ ಕೋಮುವಾದ ಶಕ್ತಿಗಳ ವಿರುದ್ಧವೇ ನಡೆದಿದೆ ಎಂದರು.

error: Content is protected !!
Scroll to Top