ಭಾರತಕ್ಕೆ 228 ರನ್‌ಗಳ ಬೃಹತ್ ಗೆಲುವು; ಹೀನಾಯವಾಗಿ ಸೋತ ಪಾಕ್
ಕೊಲಂಬೊ: ಏಷ್ಯಾಕಪ್‌ನ ಮೀಸಲು ದಿನದಲ್ಲಿ ಮುಂದುವರಿದ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪಾರಮ್ಯ ಬರೆದ ಭಾರತ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಜುಜುಬಿ ಮೊತ್ತಕ್ಕೆ ಅಲೌಟ್ ಮಾಡಿ ದಾಖಲೆಯ ಗೆಲುವು ದಾಖಲಿಸಿದೆ. ಏರಡು ಶತಕ ಮತ್ತು ಎರಡು ಶತಕಾರ್ಧ ಭಾರತದ ಇನ್ನಿಂಗ್ಸನ್ನು ಸಿಂಗರಿಸಿದ್ದವು.
ಭಾರತ ಒಡ್ಡಿದ 357 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದ ಪಾಕಿಸ್ಥಾನ 32 ಓವರ್‌ಗಳಲ್ಲಿ ಬರೀ 128 ರನ್ ಮಾಡಿ ನಿರ್ಗಮಿಸಿತು. ಪಾಕ್ ತಂಡದಲ್ಲಿ ಪೂರ್ತಿ ಆಟ ಆಡಲು ಕೂಡ ಆಟಗಾರರಿಲ್ಲ. ಇಬ್ಬರು ಗಾಯಾಳುಗಳಾಗಿ ನಿರ್ಗಮಿಸಿದ ಕಾರಣ 8 ವಿಕೆಟ್‌ಗೆ ಪಾಕಿಸ್ಥಾನದ ಇನ್ನಿಂಗ್ಸ್ ಮುಕ್ತಾಯವಾಯಿತು.
ಭಾನುವಾರದ ಪಂದ್ಯ ಮಳೆಯಿಂದ ರದ್ದಾರ ಕಾರಣ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಪಂದ್ಯ ಮುಂದುವರಿಸಲಾಯಿತು. ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ಇದ್ದು, ಪಾಕಿಸ್ಥಾನವನ್ನು ಅಧಿಕಾರಯುತವಾಗಿ ಮಣಿಸಿದ ಕಾರಣ ಲಂಕಾದವರಿಗೆ ನಡುಕ ಶುರುವಾಗಿದೆ.
ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯಮೋಘ ನಿರ್ವಹಣೆ ತೋರಿತು. ಪಾಕ್‌ನ ಕೊನೆಯಲ್ಲಿ ಬರಬೇಕಾದ ನಸೀಮ್ ಮತ್ತು ಹ್ಯಾರಿಸ್ ಫೀಲ್ಡಿಂಗ್ ಮಾಡುವಾಗ ಗಾಯವಾಗಿ ಹೊರ ಹೋಗಿದ್ದು, ಅವರು ಬ್ಯಾಟಿಂಗ್‌ಗೆ ಬಾರದ ಕಾರಣ 8 ವಿಕೆಟ್ ಕಳೆದುಕೊಂಡಾಗಲೇ ಪಾಕಿಸ್ಥಾನದ ಆಟ ಮುಗಿಯಿತು.
ಕುಲದೀಪ್ ಯಾದವ್ 5 ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರು 8 ಓವರ್‌ಗಳಲ್ಲಿ 25 ರನ್ ಮಾತ್ರ ಬಿಟ್ಟುಕೊಟ್ಟರು.
ಪಾಕಿಸ್ಥಾನದ ಪ್ರಮುಖ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಬಿಗು ಬೌಲಿಂಗ್ ವ್ಯೂಹದೊಳಗೆ ಸಿಲುಕಿ ನಲುಗಿದರು.
ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅತ್ಯಮೋಘ ಶತಕಗಳನ್ನು ಸಿಡಿಸಿ ಭಾರತದ ಬ್ಯಾಟಿಂಗ್ ಬಲ ಸಾಬೀತುಪಡಿಸಿದ್ದಾರೆ. ಭಾರತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 356 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಕೊಹ್ಲಿ 122 ರನ್ ಗಳಿಸಿ ಅಜೇಯರಾಗಿ ಉಳಿದರು. 93 ಎಸೆತಗಳಲ್ಲಿ ಆಕರ್ಷಕ 9 ಬೌಂಡರಿ ಮತ್ತು 3 ಸಿಕ್ಸರ್ ಅವರ ಇನ್ನಿಂಗ್ಸ್‌ನ ಆಕರ್ಷಣೆಯಾಗಿತ್ತು. ಜವಾಬ್ದಾರಿಯುತ ಆಟವಾಡಿದ ರಾಹುಲ್ ಅಜೇಯ 111 ರನ್ ಗಳಿಸಿದರು.106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಅವರ ಆಟದ ಆಕರ್ಷಣೆಯಾಗಿತ್ತು. 3ನೇ ವಿಕೆಟ್‌ಗೆ ಇಬ್ಬರು 233 ರನ್ ಜತೆಯಾಟವಾಡಿದ್ದು ಇದು ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಜತೆಯಾಟವಾಗಿದೆ.
ನಿನ್ನೆ ಭಾರಿ ಮಳೆಯಿಂದ ಪಂದ್ಯ ಮುಂದೂಡಿಕೆಯಾದ ವೇಳೆ 24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 8 ರನ್ ಗಳಿಸಿದ್ದ ಕೊಹ್ಲಿ ಮತ್ತು 17 ರನ್ ಗಳಿಸಿದ್ದ ರಾಹುಲ್ ಇಂದು ಆಕರ್ಷಕ ಜತೆಯಾಟವನ್ನು ಆಡಿದರು. ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್ ಶರ್ಮಾ 56 ರನ್ ಶುಭಮನ್ ಗಿಲ್ 58 ರನ್ ಗಳಿಸಿ ಔಟಾಗಿದ್ದರು.