ಬೀಳುವುದು ಸೋಲಲ್ಲ, ಬಿದ್ದಲ್ಲಿಂದ ಏಳದಿರುವುದು ಸೋಲು

ಹಾಯಿದೋಣಿಗೆ ಪ್ರವಾಹ ಎದುರಾದರೆ ದೋಣಿಯನ್ನು ಬದಲಾಯಿಸುವುದಲ್ಲ, ಹಾಯಿಯ ದಿಕ್ಕನ್ನು ಬದಲಾಯಿಸಬೇಕು ಅಷ್ಟೇ

ಸಂಶೋಧನೆಯ ಪ್ರಕಾರ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಆತ್ಮಹತ್ಯೆ ಮಾಡಬೇಕು ಎಂಬ ಯೋಚನೆ ಬರುತ್ತದೆಯಂತೆ. ಹಾಗೆ ಎಲ್ಲರೂ ಯೋಚನೆ ಬಂದ ತಕ್ಷಣ ಆತ್ಮಹತ್ಯೆ ಮಾಡುತ್ತಾ ಹೋದರೆ ಜಗತ್ತಿನಲ್ಲಿ ಕೊನೆಗೆ ಉಳಿಯುವುದು ಯಾರು? ಯೋಚನೆ ಮಾಡಿ.

ಕುಂದಾಪುರದಲ್ಲಿ ನೀಟ್ ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂತು ಎಂಬ ಕಾರಣಕ್ಕೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಡುಪಿಯಲ್ಲಿ ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಡಿಮೆ ಆಯ್ತು ಎಂಬ ನೋವಿನಲ್ಲಿ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಹಾಗೆಯೇ ಮಂಗಳೂರಿನಲ್ಲಿ ತನ್ನ ಏಕಮುಖ ಪ್ರೀತಿ ಸೋತಿತು ಎಂಬ ಕಾರಣಕ್ಕೆ ಒಬ್ಬ ಹದಿಹರೆಯದ ಹುಡುಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವ್ಯಾಪಾರದಲ್ಲಿ ನಷ್ಟ ಆಯಿತು ಎಂಬ ಕಾರಣಕ್ಕೆ ಒಂದು ಇಡೀ ಕುಟುಂಬವೇ ಸಾವಿಗೆ ಶರಣಾಗುತ್ತದೆ. ಮೊಬೈಲ್ ಬಳಕೆಯನ್ನು ಹೆಚ್ಚು ಮಾಡಿದ್ದಕ್ಕೆ ಅಮ್ಮ ಬೈದರು ಎಂಬ ಕಾರಣಕ್ಕೆ ಮಗಳು ಬಾವಿಗೆ ಹಾರಿ ಉಸಿರು ಚೆಲ್ಲುತ್ತಾಳೆ.
ಆರ್ಥಿಕ ಸಂಕಷ್ಟದ ಕಾರಣಕ್ಕೆ, ಪ್ರೀತಿ ವೈಫಲ್ಯಕ್ಕೆ, ಪರೀಕ್ಷೆಯ ಅಂಕಗಳು ಕಡಿಮೆ ಆಯ್ತು ಎಂಬ ಕಾರಣಕ್ಕೆ, ಪದೇಪದೆ ಸೋಲು ಬಂತು ಎಂಬ ಕಾರಣಕ್ಕೆ, ಸಾಂಸಾರಿಕ ವೈಫಲ್ಯಕ್ಕೆ, ಮನಸ್ತಾಪಗಳಿಗೆ, ಸಣ್ಣ ಸಣ್ಣ ಸೋಲುಗಳಿಗೆ ಹೆದರಿ… ಹೀಗೆ ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಶರಣಾದವರು ಅನೇಕ ಮಂದಿ.
ಆತ್ಮಹತ್ಯೆಯ ಪಿಡುಗಿಗೆ ಹೆಚ್ಚು ಬಲಿಯಾಗುವವರು ಹದಿಹರೆಯದವರು ಮತ್ತು ಯುವಜನತೆ ಎನ್ನುವುದು ಕೂಡ ಆತಂಕಕಾರಿ. ಯಾಕೆ ಹೀಗಾಗುತ್ತಿದೆ?

ಬಾಕ್ಸಿಂಗ್ ದಂತಕತೆ ಮೊಹಮದ್ ಅಲಿ ಹೇಳಿದ ಮಾತು, ಯಾವುದೇ ಕ್ರೀಡೆಯಲ್ಲಿ ಕೆಳಗೆ ಬೀಳುವುದು ಸೋಲು ಅಲ್ಲ. ಕೆಳಗೆ ಬಿದ್ದಾಗ ಏಳದೆ ಇರುವುದು ಸೋಲು.
ಸೋಲು ಬಂದಾಗ ಎದುರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುವವರು ಯೋಚನೆ ಮಾಡಬೇಕು ಏನೆಂದರೆ ಸಾವು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವುದಿಲ್ಲ. ಅದು ನಿಮ್ಮನ್ನು ನಂಬಿದವರನ್ನು ಪಾತಾಳಕ್ಕೆ ತಳ್ಳುತ್ತದೆ ಮತ್ತು ಇನ್ನೂ ನೂರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸಮಸ್ಯೆಗಳನ್ನು ಎದುರಿಸದೆ ಪಲಾಯನ ಮಾಡಿದವರನ್ನು ಅವರ ಕುಟುಂಬ ಮತ್ತು ಸಮಾಜ ಮುಂದೆ ಎಂದಿಗೂ ಕ್ಷಮಿಸುವುದಿಲ್ಲ.
ಆತ್ಮಹತ್ಯೆ ಒಂದು ಕ್ಷಣದ ಭಾವಾವೇಶ ಆಗಿದೆ. ಒಂದು ನೆಗೆಟಿವ್ ಭಾವತೀವ್ರತೆ. ಅದನ್ನು ಒಮ್ಮೆ ನಮಗೆ ಹತ್ತಿಕ್ಕಲು ಸಾಧ್ಯವಾದರೆ ಎಷ್ಟೋ ಆತ್ಮಹತ್ಯೆಗಳನ್ನು ತಡೆಯಬಹುದು.

ತನಗೆ ಎದುರಾದ ಸವಾಲುಗಳಿಗೆ ಬೆನ್ನು ಹಾಕಿ ಆತ್ಮಹತ್ಯೆ ಮಾಡುವುದು ಎಂದಾದರೆ ಅಮಿತಾಬ್ ಬಚ್ಚನ್ ಈವರೆಗೆ ಎಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು?
ಹದಿಮೂರು ಚುನಾವಣೆ ಸೋತ ಅಬ್ರಹಾಂ ಲಿಂಕನ್ ಎಷ್ಟು ಬಾರಿ ನೇಣು ಹಾಕಿಕೊಳ್ಳಬೇಕಿತ್ತು?
ಹಲವು ಬಾರಿ ತನ್ನ ಬೈಕ್ ಫ್ಯಾಕ್ಟರಿ ಸುಟ್ಟು ಹೋಗಿ ಪೂರ್ತಿ ದಿವಾಳಿ ಆದ ಜಪಾನ್ ಉದ್ಯಮಿ ಹೊಂಡಾ ಎಷ್ಟು ಬಾರಿ ತನ್ನನ್ನು ತಾನು ಶೂಟ್ ಮಾಡಿಕೊಳ್ಳಬೇಕಿತ್ತು?
ಹಸಿವು ಮತ್ತು ಬಡತನ ಸಾಯಲು ಕಾರಣ ಎಂದಾದರೆ ರಸ್ತೆ ಬದಿಗಳಲ್ಲಿ ಜೋಪಡಿಯಲ್ಲಿ ರಾತ್ರಿ ಹೊತ್ತು ಮಲಗುವ, ಹಸಿದ ಅಲೆಮಾರಿಗಳು ಎಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? ಯೋಚಿಸಿ.

ಒಬ್ಬ ಹದಿಹರೆಯದ ಹುಡುಗ ತನ್ನ ಪ್ರೀತಿಯನ್ನು ಹುಡುಗಿ ತಿರಸ್ಕಾರ ಮಾಡಿದಳು ಎಂಬ ಕಾರಣಕ್ಕೆ ವಿಷ ಕುಡಿದು ಸಾಯುತ್ತಾನೆ. ಅವನ ಉದ್ದೇಶ ಖಂಡಿತವಾಗಿಯೂ ತಾನು ಸಾಯುವುದಕ್ಕಿಂತ ಆಕೆಗೆ ಬುದ್ಧಿ ಕಲಿಸಬೇಕು ಎಂದು ಇರುತ್ತದೆ. ಅವನ ಸಾವಿನಿಂದ ಆಕೆಯು ಬುದ್ಧಿ ಕಲಿತಳೆ? ಅವಳು ಬೇರೊಬ್ಬನನ್ನು ಮದುವೆಯಾಗಿ ಸೊಂಟದ ಮೇಲೆ ಒಂದು ಮಗುವನ್ನು ಎತ್ತಿಕೊಂಡ ದೃಶ್ಯವನ್ನು ಒಮ್ಮೆ ಕಲ್ಪನೆ ಮಾಡಿದ್ದರೆ ಆ ಹುಡುಗ ಖಂಡಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.

ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಆಯ್ತು ಎಂದು ಸುಸೈಡ್ ಮಾಡಿಕೊಳ್ಳಲು ಹೊರಡುವ ಮಕ್ಕಳಿಗೆ ನಾನು ಹೇಳುವುದು ಏನೆಂದರೆ ಪರೀಕ್ಷೆಯ ಅಂಕಗಳು ಮಾತ್ರ ನಿಮ್ಮ ಯಶಸ್ಸು ಅಲ್ಲ. ಅದೊಂದೇ ನಿಮ್ಮ ಪ್ರತಿಭೆಯ ಪೂರ್ತಿಯಾದ ಮಾಪನ ಅಲ್ಲವೇ ಅಲ್ಲ.
ಪರೀಕ್ಷೆಯಲ್ಲಿ ಫೇಲ್ ಆದವರೆಲ್ಲರೂ ಆತ್ಮಹತ್ಯೆ ಮಾಡಲು ಹೊರಟಿದ್ದರೆ ಖ್ಯಾತರಾದ ರವಿ ಬೆಳಗೆರೆ, ಅಮಿತಾಬ್ ಬಚ್ಚನ್, ಆಮೀರ್ ಖಾನ್, ಶ್ರೀನಿವಾಸ್ ರಾಮಾನುಜಂ, ಆರ್.ಕೆ ನಾರಾಯಣ್ ಮೊದಲಾದವರು ಸುಸೈಡ್ ಮಾಡಬೇಕಿತ್ತು ಅಲ್ವಾ? ಅಬ್ದುಲ್ ಕಲಾಂ ಕೂಡ ಪೈಲಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.

ಪರೀಕ್ಷೆಯಲ್ಲಿ ಫೇಲ್ ಆಗಿ ಕೂಡ ಜೀವನದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಪಾಸಾದವರು ಸಾವಿರಾರು ಜನರು ಇದ್ದಾರೆ. ಅಂಕಗಳನ್ನು ಪಡೆಯುವುದೇ ಮುಖ್ಯ ಎಂಬ ನಮ್ಮ ಶೈಕ್ಷಣಿಕ ವ್ಯವಸ್ಥೆ ಉಂಟುಮಾಡಿದ ಭ್ರಮೆ ಮತ್ತು ರಾಂಕ್‌ಗಳನ್ನು ಪಡೆಯುವುದೇ ಶಿಕ್ಷಣದ ಉದ್ದೇಶ ಎಂದು ನಂಬಿರುವ ನಮ್ಮ ಹೆತ್ತವರ ಮೈಂಡ್‌ಸೆಟ್‌ ಬದಲಾಗುವವರೆಗೂ ಈ ಅನಾಹುತ ನಡೆಯುತ್ತಲೆ ಇರುತ್ತದೆ.
ಸಿಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳು ಮಕ್ಕಳಲ್ಲಿ ಹೆಚ್ಚು ಆತಂಕವನ್ನು ಹುಟ್ಟು ಹಾಕುತ್ತಿವೆ. ಎಷ್ಟೋ ಕಡೆ ಹೆತ್ತವರು ತಮಗೆ ಅರಿವಿಲ್ಲದ ಹಾಗೆ ತಮ್ಮ ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡುತ್ತಿದ್ದಾರೆ.
‘ನನ್ನ ಮಗನಿಗೆ ಬರೇ ಗೆಲ್ಲುವುದನ್ನು ಕಲಿಸಬೇಡಿ, ಅವನಿಗೆ ಸೋಲುವುದನ್ನು ಕೂಡ ಕಲಿಸಿಕೊಡಿ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ತನ್ನ ಮಗನ ಶಿಕ್ಷಕಿಗೆ ಬರೆದ ಪತ್ರದ ಆಶಯ ನಮಗೆ ಅರ್ಥ ಆದರೆ ಸಾಕು.
ಸೋಲು ಬಂತು ಅಂದರೆ ಎಲ್ಲವೂ ಮುಗಿದುಹೋಯಿತು ಎಂದು ಅರ್ಥ ಅಲ್ಲ. ಯಶಸ್ಸು ಸ್ವಲ್ಪ ದೂರ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಪದೇಪದೆ ಸೋಲುಗಳು ಬಂದಾಗ ನಾವು ಎಲ್ಲವನ್ನೂ ಕೈಚೆಲ್ಲಬೇಕು ಎಂದರ್ಥ ಅಲ್ಲ. ನಮ್ಮ ಯೋಜನೆಯಲ್ಲಿ ಎಲ್ಲೋ, ಏನೋ ದೋಷ ಇದೆ ಎಂದು. ಅದನ್ನು ಟ್ರೇಸ್ ಮಾಡಿ ಸರಿಪಡಿಸಿಕೊಂಡರೆ ಸಾಕು.
ಒಬ್ಬನಿಗೆ ಸೋಲು ಬಂತು ಅಂದರೆ ಡಿಪ್ರೆಸ್ ಆಗಬೇಕು ಎಂದು ಅರ್ಥ ಅಲ್ಲ. ಸೋಲಿನ ಕಾರಣ ಹುಡುಕಬೇಕು. ಆತ್ಮಾವಲೋಕನ ಮಾಡಬೇಕು ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಸತತವಾಗಿ ಸೋಲು ಬಂತು ಅಂದರೆ ನಿಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಬತ್ತಿ ಹೋಗಿದೆ ಅಂತ ಅರ್ಥ ಅಲ್ಲ. ನಿಮಗೆ ನಿಮ್ಮ ಮೇಲೆ ನಂಬಿಕೆ ಕಡಿಮೆ ಆಗಿದೆ ಎಂದರ್ಥ.
ಹಾಯಿದೋಣಿಯಲ್ಲಿ ಹೋಗುವಾಗ ಎದುರು ಪ್ರವಾಹ ಬಂತು ಅಂದರೆ ದೋಣಿಯನ್ನು ಬದಲಾವಣೆ ಮಾಡಬೇಕು ಅಂತ ಅರ್ಥ ಅಲ್ಲ. ನಿಮ್ಮ ದೋಣಿಯ ಹಾಯಿಯ ದಿಕ್ಕನ್ನು ಬದಲಾಯಿಸಬೇಕು ಅಷ್ಟೇ.
ಸಾವು ಅತ್ಯಂತ ಭಯಾನಕವಾದ ಸ್ಥಿತಿ. ಒಮ್ಮೆ ಸಾವಿನ ಮನೆಯನ್ನು ಭೇಟಿ ಮಾಡಿ ನೋಡಿ, ನಿಮಗೆ ಆಗ ಅದರ ತೀವ್ರತೆ ಅರ್ಥ ಆಗುತ್ತದೆ. ಅಕಾಲಿಕವಾದ ಸಾವು ಉಂಟುಮಾಡುವ ಶಾಶ್ವತ ನೋವು, ಶೂನ್ಯತೆ, ಅನಿಶ್ಚಿತತೆ, ನಷ್ಟಗಳನ್ನು ಒಮ್ಮೆ ಯೋಚನೆ ಮಾಡಿದರೆ ನಾವು ಖಂಡಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ನಮ್ಮ ಮನಸಿನ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿ ಮಾಡಲು ಅವಕಾಶ ದೊರೆತರೆ ನಾವು ಅಂತರ್ಮುಖಿ ಆಗುವುದಿಲ್ಲ. ಮನೆಯವರ ಜತೆ, ಆಪ್ತ ಗೆಳೆಯರ ಜತೆ ಮನಸ್ಸು ತೆರೆದು ಮಾತಾಡುವ ಅವಕಾಶ ಪಡೆದಷ್ಟು ನಾವು ಬಹಿರ್ಮುಖಿ ಆಗುತ್ತೇವೆ. ಆಗ ಆತ್ಮಹತ್ಯೆಯ ತೀವ್ರವಾದ ಯೋಚನೆಗಳು ಕಡಿಮೆ ಆಗುತ್ತವೆ. ನಮ್ಮ ಜತೆ ಯಾರೋ ಕೊನೆಯವರೆಗೆ ಇರುತ್ತಾರೆ ಎನ್ನುವ ಫೀಲ್ ನಮ್ಮನ್ನು ಬಲಿಷ್ಠ ಮಾಡುತ್ತದೆ.
ತನ್ನ ಸಂಸಾರವನ್ನು ನಂಬಿಕೆಗೆ ತೆಗೆದುಕೊಂಡ ಹಾಗೂ ತನ್ನ ಮನೆಯವರನ್ನು ಸಹಜವಾಗಿ ಪ್ರೀತಿಸುವ ಯಾವುದೇ ವ್ಯಕ್ತಿ ಖಂಡಿತವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.































































































































































error: Content is protected !!
Scroll to Top