ಕರಾವಳಿಯಲ್ಲಿ ಮಳೆಯಬ್ಬರ : ಬಾವಿ ಕುಸಿದು ಮಹಿಳೆ ಮೃತ

ಪಂಪ್‌ವೆಲ್‌ನ ಕೃತಕ ನೆರೆ ಭಾರಿ ಟ್ರೋಲ್‌

ಮಂಗಳೂರು : ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ತಾಲೂಕುಗಳಲ್ಲಿ ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂಡುಬಿದಿರೆ, ಮಂಗಳೂರು, ಮೂಲ್ಕಿ, ಉಲ್ಲಾಳ ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಆದೇಶ ಹೊರಡಿಸಿದ್ದಾರೆ.
ಸೋಮವಾರದಿಂದೀಚೆಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದೆ. ಕೆಲವೆಡೆ ಮಳೆ ಸಂಬಂಧಿತ ಹಾನಿಗಳು ಸಂಭವಿಸಿವೆ. ಶಿರ್ವದಲ್ಲಿ ಆವರಣವಿಲ್ಲದ ಬಾವಿಯ ಸುತ್ತಲಿನ ಮಣ್ಣು ಕುಸಿದು ಗುಲಾಬಿ (43) ಎಂಬ ಮಹಿಳೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮೊದಲ ಅಬ್ಬರದ ಮಳೆಯೇ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಪಂಪ್‌ವೆಲ್‌ ಫ್ಲೈಓವರ್‌ನ ಅಡಿಯಲ್ಲಿ ನೀರು ನಿಂತು ಹೊಳೆಯಂತಾಗಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದ್ದು, ಈ ಫ್ಲೈಓವರ್‌ನ ಇಂಜಿನಿಯರಿಂಗ್‌ ಪ್ಲಾನ್‌ ಮತ್ತೆ ವಿಪರೀತ ಟ್ರೋಲ್‌ಗೆ ಗುರಿಯಾಯಿತು. ಜನ ಇಲ್ಲಿನ ಫೋಟೊ, ವೀಡಿಯೊ ಹಾಕಿಕೊಂಡು ಇಂಜಿನಿಯರ್‌ಗಳನ್ನು ಮತ್ತು ಜನಪ್ರತಿನಿಧಿಗಳನ್ನು ಲೇವಡಿ ಮಾಡಿದ್ದಾರೆ.
ಬರೀ ಒಂದು ತಾಸು ಸುರಿದ ವಿಪರೀತ ಮಳೆಯಿಂದಾಗಿ ರಾಜಕಾಲುವೆ ಉಕ್ಕಿ ಹರಿದು ಪಂಪ್‌ವೆಲ್‌ ಪೇಟೆಯಿಡೀ ಜಲಾವೃತಗೊಂಡು ಜನ ಓಡಾಡಲು ಪರದಾಡಿದರು. ಕೊಟ್ಟಾರಚೌಕಿ ಸೇರಿದಂತೆ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಜನರು ಆಡಳಿತಕ್ಕೆ ಹಿಡಿಶಾಪ ಹಾಕಿದರು. ಉಡುಪಿಯಲ್ಲೂ ಮರ ಉರುಳಿದ, ಗೋಡೆ ಬಿದ್ದ ಘಟನೆಗಳು ಸಂಭವಿಸಿವೆ.



































































































error: Content is protected !!
Scroll to Top