ಬಂಡವಾಳ ಶಾಹಿಗಳ ಅನುಕೂಲಕ್ಕಾಗಿ ಕೆಲಸದ ಅವಧಿ ವಿಸ್ತರಣೆ ಖಂಡನೀಯ – ಬಾಲಕೃಷ್ಣ ಶೆಟ್ಟಿ

ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ವೇತನ ಹೆಚ್ಚಳವಿಲ್ಲ

ಕಾರ್ಕಳ : ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಹಿತಾಸಕ್ತಿ ಕಾಪಾಡುವಲ್ಲಿ ಮೇ ದಿನಾಚರಣೆ ಮಹತ್ವದ್ದಾಗಿದ್ದು, ಎಂಟು ಗಂಟೆಗಳ ದುಡಿಮೆಯ ಹಕ್ಕಿಗಾಗಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಕಳ, ಉಡುಪಿ, ಬ್ರಹ್ಮಾವರ, ಸಾಲಿಗ್ರಾಮ, ಕುಂದಾಪುರ, ಬೈಂದೂರು ಸೇರಿದಂತೆ ಉಡುಪಿ ಜಿಲ್ಲೆಯ ಆರು ಕಡೆಗಳಲ್ಲಿ ಮೇ ದಿನಾಚರಣೆ ನಡೆಯುತ್ತಿದೆ. ಕಾರ್ಮಿಕರ ಹಿತರಕ್ಷಣೆಯ ಸಲುವಾಗಿ ಸರಕಾರ ತನ್ನ ಆದೇಶಗಳ ಕುರಿತು ಆಲೋಚಿಸಬೇಕಾಗಿದೆ ಎಂದು ಸಿಐಟಿಯು ಜಿಲ್ಲಾ ಉಪಾ‍ಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಮೇ 1 ರಂದು ಕಾರ್ಕಳ ಬಸ್‌ನಿಲ್ದಾಣದ ಬಳಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ ವತಿಯಿಂದ ನಡೆದ ಎಂಟು ಗಂಟೆಗಳ ದುಡಿಮೆಯ ಹಕ್ಕಿಗಾಗಿ ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

1923ರಲ್ಲಿ ಮೊಟ್ಟ ಮೊದಲ ದಿನಾಚರಣೆ
ಭಾರತದಲ್ಲಿ 1923 ಮೇ 1 ರಂದು ಮೊಟ್ಟ ಮೊದಲ ಬಾರಿಗೆ ಮೇ ದಿನ ಆಚರಣೆ ಮಾಡಿಲಾಗಿದ್ದು, ಆಗ ಕೇವಲ ಒಬ್ಬನೇ ಕಾರ್ಮಿಕ ಬಾವುಟ ಹಾರಿಸಿರುತ್ತಾರೆ. ಇದೀಗ ಮೇ ದಿನಾಚರಣೆಗೆ ನೂರು ವರ್ಷ ಪೂರ್ಣಗೊಂಡಿದೆ. ಫ್ರಾನ್ಸ್ ನಲ್ಲಿ ನಿವೃತ್ತಿ ವಯಸ್ಸು 62 ಇದ್ದು ಪಿಂಚಣಿ ನೀಡಬೇಕೆಂಬ ಉದ್ದೇಶದಿಂದ 64 ವರ್ಷ ನಿವೃತ್ತಿ ವಯಸ್ಸಾಗಿ ಮಾಡಿದಾಗ 6 ಮಿಲಿಯನ್‌ ಕಾರ್ಮಿಕರು ಪ್ರತಿಭಟನೆ ಮಾಡಿದ್ದರು. ಹೀಗೆ ಜಗತ್ತಿನೆಲ್ಲೆಡೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

ಬ್ಯಾಂಕುಗಳ ಖಾಸಗೀಕರಣ ಸರಿಯಲ್ಲ
ಇವತ್ತು ಅಮೇರಿಕಾದಲ್ಲಿ ಬ್ಯಾಂಕ್ ಗಳು ದಿವಾಳಿಯಾಗುತ್ತಿವೆ, ಭಾರತಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ದಿವಾಳಿ ಆಗಿಲ್ಲ ಏಕೆಂದರೆ ಬ್ಯಾಂಕಿಂಗ್‌ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನತೆಯ ಭರವಸೆಯನ್ನು ಉಳಿಸಿಕೊಂಡಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಕೃತ ಬ್ಯಾಂಕುಗಳಿದ್ದವು. ಆದರೆ ಪ್ರಸ್ತುತ ನಾಲ್ಕೂ ಬ್ಯಾಂಕ್‌ಗಳನ್ನು ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಲಾಗಿದೆ. ವಿದೇಶಿ ಬ್ಯಾಂಕ್‌ಗಳ ಜೊತೆಗಿನ ಸ್ಪರ್ಧೆಗಾಗಿ ಈ ವಿಲೀನ ಎಂದು ಅಂದು ಹೇಳಲಾಗುತ್ತಿದ್ದರೂ ಬ್ಯಾಂಕ್‌ಗಳ ಖಾಸಗಿಕರಣವೇ ಇದರ ಮೂಲ ಉದ್ದೇಶವೆಂದು ಬಾಲಕೃಷ್ಣ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
1969 ರಿಂದ ಇಲ್ಲಿಯವರೆಗೆ ಸುಮಾರು 80 ಖಾಸಗಿ ಬ್ಯಾಂಕುಗಳು ದಿವಾಳಿಯಾಗಿದ್ದು, ಅನೇಕ ಜನರ ಡೆಪೋಸಿಟ್‌ ಕಳೆದುಕೊಂಡಿದ್ದಾರೆ. ಹೀಗಾಗಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕೆಲಸದ ಅವಧಿ ವಿಸ್ತರಣೆ ಖಂಡನೀಯ
ಇವತ್ತಿನ ರಾಜ್ಯ ಸರಕಾರ ಕೆಲಸದ ಅವಧಿಯನ್ನು ಎಂಟು ಗಂಟೆಯಿಂದ 12 ಗಂಟೆಗೆ ವಿಸ್ತರಣೆ ಮಾಡಿದೆ. ಈ ಬಗ್ಗೆ ಬಿಜೆಪಿ ಸರಕಾರ ಉತ್ತರ ನೀಡಬೇಕಾಗಿದೆ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಇಂತಹ ನಿಯಮದಿಂದ ಸಮಯದ ಬದಲಾವಣೆ ಮಾಡಲಾಗುತ್ತಿದೆ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಲೆಯೇರಿಕೆಯಂತೆ ವೇತನ ಜಾಸ್ತಿಯಿಲ್ಲ
ಇವತ್ತು ಅಗತ್ಯವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ಆದರೆ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಜಾಸ್ತಿಯಾಗುತ್ತಿಲ್ಲ. ಬಿಸಿಯೂಟ ತಯಾರಿಸುವ ನೌಕರರಿಗೆ ಇವತ್ತು ಕೇವಲ 3,600- 3,700 ರೂ. ನೀಡಲಾಗುತ್ತಿದೆ. ಅಂಗನವಾಡಿ ನೌಕರರಿಗೂ ಪೂರ್ಣ ಸಂಬಳ ಸಿಗುತ್ತಿಲ್ಲ. ದೊಡ್ಡ ದೊಡ್ಡ ಕಂಪೆನಿಗಳ ಲಾಭಕ್ಕೆ ಹೋಲಿಸಿದರೆ ಅಲ್ಲಿನ ನೌಕರರ ವೇತನ ಕಡಿಮೆ ಇದೆ. ಇನ್ನು ಕಟ್ಟಡ ಕಾರ್ಮಿಕರು ಹಾಗೂ ಇತರೆ ಸಣ್ಣ ಕಾರ್ಮಿಕರಿಗೆ ಪ್ರತಿನಿತ್ಯ ದುಡಿಮೆ ಇರುವುದಿಲ್ಲ. ಹೀಗಿರುವಾಗ ಬೆಲೆ ಏರಿಕೆಯ ನಡುವೆ ಕಾರ್ಮಿಕ ವರ್ಗ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಬಿಸಿಯೂಟ ಕಾರ್ಮಿಕರ ಸಂಘದ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ಜ್ಯೋತಿ, ಲ್ಯಾಮಿನಾ ಸಂಸ್ಥೆಯ ಕಾರ್ಮಿಕರ ಅಧ್ಯಕ್ಷ ಮೋಹನ್‌ ಚಂದ್ರ ಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್‌ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.





























































































































error: Content is protected !!
Scroll to Top