ಕಾರ್ಕಳ : ಮೊಬೈಲ್, ಸಾಮಾಜಿಕ ಜಾಲತಾಣ ಮತ್ತು ಬೈಕ್ ಬಳಕೆ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಈ ಕುರಿತು ಪೋಷಕರು ತಮ್ಮ ಮಕ್ಕಳೆಡೆಗೆ ಗಮನಹರಿಸುವುದು ಅವಶ್ಯ ಎಂದು ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅಭಿಪ್ರಾಯಪಟ್ಟರು. ಅವರು ಡಾ. ಎನ್. ಎಸ್.ಎ. ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ ನಂತರ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಾದ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಶಿಕ್ಷಣದಲ್ಲಿ ಆಸಕ್ತಿ ಉಳ್ಳವರು ಎಂದು ಸಾಬೀತುಪಡಿಸಿಕೊಳ್ಳುವ ಒತ್ತಡಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಸಮಸ್ಯೆಯನ್ನು ಅರಿತುಕೊಳ್ಳುವ ಮನಸ್ಥಿತಿಯನ್ನು ಹೊಂದಬೇಕು ಎಂದರು.
ನಿಟ್ಟೆ ಕ್ಯಾಂಪಸ್‌ನ ಆಪ್ತ ಸಮಾಲೋಚಕ ಅಂಕಿತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸುಸ್ಥಿರ ಬೆಳವಣಿಗೆಯಲ್ಲಿ ಆಪ್ತ ಸಮಾಲೋಚನಾ ಕಾರ್ಯಕ್ರಮದ ಮಹತ್ವವಾದುದು. ಆದರೆ ಮಕ್ಕಳ ಬಗೆಗಿನ ಮಾಹಿತಿ ಅವರ ಸ್ನೇಹಿತರು, ಆಪ್ತ ಸಮಲೋಚಕರಿಗಿಂತ ಪೋಷಕರಿಗೆ ತಿಳಿದಿರಬೇಕು ಆಗ ಮಾತ್ರ ಮಕ್ಕಳು ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಉಮಾ ಉಪಾಧ್ಯಾಯ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾಕುಮಾರಿ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಬಿ. ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರಮೇಶ್ ಎಂ. ವಂದಿಸಿದರು.

























