ಹೈಕಮಾಂಡ್‌ ಡಿಕೆಶಿಯನ್ನು ಸಿಎಂ ಮಾಡುವುದಿಲ್ಲ ಎಂದ ಸಿದ್ದರಾಮಯ್ಯ

ಡಿಕೆಶಿ ನಿದ್ದೆಗೆಡಿಸಿದ ಸಿದ್ದರಾಮಯ್ಯ ಸಂದರ್ಶನ

ಬೆಂಗಳೂರು : ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ಕಾಂಗ್ರೆಸ್ಸಿನ ಒಳ ಬೇಗುದಿಯನ್ನು ಹೆಚ್ಚಿಸಿದೆ. ಇಂಗ್ಲಿಷ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್‌ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಹೇಳಿಕೆ ವಿಕೋಪಕ್ಕೆ ತಿರುಗುವ ಮೊದಲು ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿದ್ದು, ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೆ ನೀಡಿಲ್ಲ. ಪ್ರಜಾಭುಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಸಿಎಂ ಆಯ್ಕೆ ಆಗಲಿದೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಅಂತ ಹೇಳಿದ್ದೆ ಎಂದು ತೇಪೆ ಹಚ್ಚಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕೂಡ ಆಕಾಂಕ್ಷಿ. ಆದರೆ ಹೈಕಮಾಂಡ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿ ವರದಿ ಮಾಡಿತ್ತು.
ಕೋಲಾರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ಒಪ್ಪಿದರೆ ಮಾತ್ರ ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ತಮಗೆ ಈಗಾಗಲೇ ವರುಣದಿಂದ ಟಿಕೆಟ್‌ ದೊರಕಿದ್ದು, ವರುಣದಿಂದಲೇ ಸ್ಪರ್ಧಿಸಲಿದ್ದೇನೆ. ಆದರೆ, ಕೋಲಾರದಲ್ಲಿ ಸ್ಪರ್ಧಿಸಿದರೆ ಸುತ್ತಲಿನ 20 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಸ್ಥಳೀಯ ನಾಯಕರಿಂದ ಒತ್ತಾಯವಿದೆ. ಹೀಗಾಗಿ ಈ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಹೈಕಮಾಂಡ್‌ ಒಪ್ಪಿದರೆ ಮಾತ್ರ ಕೋಲಾರದಿಂದ ಸ್ಪರ್ಧಿಸುವೆ ಎಂದು ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವುದು ರಹಸ್ಯ ವಿಚಾರವಲ್ಲ. ಈ ಕಾರಣದಿಂದಲೆ ಪಕ್ಷಕ್ಕೆ ಬಹುಮತ ದೊರಕಿಸಿಕೊಡಬೇಕೆಂದು ಇಬ್ಬರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಒಳಗೆ ಭಿನ್ನಮತ ಇದ್ದರೂ ಹೊರಗೆ ತಾವಿಬ್ಬರೂ ಜತೆಯಾಗಿದ್ದೇವೆ ಎಂಬ ಫೋಸ್‌ ಕೊಡುತ್ತಿದ್ದಾರೆ. ಇವೆಲ್ಲ ಎಲ್ಲರಿಗೂ ತಿಳಿದಿರುವ ರಹಸ್ಯ. ಈ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಕೇಳುವ ಸಮೀಕ್ಷೆಗಳು ಭವಿಷ್ಯ ನುಡಿದಿರುವುದು ಇವರ ಉತ್ಸಾಹವನ್ನು ಹೆಚ್ಚಿಸಿದೆ. ಸದ್ಯಕ್ಕೆ ಇಬ್ಬರೇ ಸಿಎಂ ಆಕಾಂಕ್ಷಿಗಳಿರುವುದುರಿಂದ ಪಟ್ಟ ತನಗೇ ಸಿಗಬೇಕೆಂದು ಇಬ್ಬರೂ ನಾನಾ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ ಈ ನಡುವೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಡಿಕೆಶಿ ಪಾಳಯದ ನಿದ್ದೆಗೆಡಿಸಿದೆ. ಹೀಗಾಗಿ ಅವರ ಒಗ್ಗಟ್ಟಿನ ಪ್ರದರ್ಶನ ಎಷ್ಟು ಸಮಯ ಇರುತ್ತದೆ ಎನ್ನುವುದನ್ನು ಕಾದು ನೋಡಬೇಕು.

















































error: Content is protected !!
Scroll to Top