ಹದಗೆಟ್ಟ ಕೆರ್ವಾಶೆ-ಕೂಡುಬೆಟ್ಟು ಸಂಪರ್ಕ ರಸ್ತೆ : ಹೊಂಡದಲ್ಲಿ ಗಿಡನೆಟ್ಟು ಪ್ರತಿಭಟನೆ

ಕಾರ್ಕಳ: ಸಂಪೂರ್ಣ ಹದಗೆಟ್ಟಿರುವ ಕೆರ್ವಾಶೆ-ಕೂಡುಬೆಟ್ಟು ಸಂಪರ್ಕ ರಸ್ತೆ ದುರಸ್ತಿ ಮಾಡದಿರುವುದನ್ನು ಪ್ರತಿಭಟಿಸಿ ಜನರು ರಸ್ತೆ ಹೊಂಡದಲ್ಲಿ ಗಿಡನೆಟ್ಟು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಒಂದಾಲಿನ ಆಳದ ಹೊಂಡಗಳು ನಿರ್ಮಾಣವಾಗಿ ವಾಹನ ಮತ್ತು ಜನ ಸಂಚಾರ ದುಸ್ತರವಾಗಿದೆ. ಈ ಭಾಗದ ನೂರಾರು ಮನೆಗಳಿಗೆ ಇರುವುದೊಂದೇ ಸಂಪರ್ಕ ರಸ್ತೆ. ಶಾಲಾಮಕ್ಕಳು ಮತ್ತು ನಿತ್ಯ ಓಡಾಡುವವರು ರಸ್ತೆ ಸರಿಯಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬಸದಿಗೂ ಈ ರಸ್ತೆಯ ಮೂಲಕವೇ ಹೋಗಬೇಕು. ರಸ್ತೆಯಲ್ಲಿ ಹೊಂಡಗುಂಡಿಗಳಿರುವುದರಿಂದ ಇಲ್ಲಿಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಸರಿಪಡಿಸಲು ಸಾರ್ವಜನಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟವರ ಕಿವಿ ಮೇಲೆ ಈ ಕೂಗು ಇನ್ನೂ ಬಿದ್ದಿಲ್ಲ. ಶಾಸಕ, ಸಚಿವರಾದಿಯಾಗಿ ಎಲ್ಲರಿಗೂ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ ಎಂದು ಜನ ಆರೋಪಿಸಿದ್ದಾರೆ.
ಈ ಭಾಗದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ರಸ್ತೆ ಕೆಟ್ಟು ಹೋಗಿರುವುದರಿಂದ ಜನರಿಗೆ ತುರ್ತು ಪರಿಸ್ಥಿಯಲ್ಲಿ ಓಡಾಡಲು ಕೂಡ ಸಮಸ್ಯೆಯಾಗುತ್ತಿದೆ. ಆಟೋದವರು ಈ ರಸ್ತೆ ಮೂಲಕ ಬರಲು ಒಪ್ಪುತ್ತಿಲ್ಲ. ಆದಷ್ಟು ಬೇಗ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕೆಂದು ಇಲ್ಲಿನ ಜನ ಆಗ್ರಹಿಸಿದ್ದಾರೆ.
ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ,ಗಣೇಶ್ ಪೂಜಾರಿ,ಶಶಿಧರ್ ಭಟ್,ದೇವಸ್ಥಾನದ ಅರ್ಚಕರಾದ ಜಗದೀಶ್ ಭಟ್,ಮಹದೇವ್ ಭಟ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





























































































































































































































error: Content is protected !!
Scroll to Top