ಕಾರ್ಕಳ : ಖಾಸಗಿ ಬಸ್‌ಗಳಿಂದಲೇ ಗಿಜಿಗುಡುತ್ತಿದ್ದ ಕಾರ್ಕಳ ಬಸ್ ನಿಲ್ದಾಣ ಇದೀಗ ಕಾರು ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಕಾರ್ಕಳ ಪೇಟೆಯಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಿಲ್ಲದೇ ಇರುವುದರಿಂದ ಕಾರು ಮಾಲಕ, ಚಾಲಕರು ತಮ್ಮ ಕಾರನ್ನು ವಿಶಾಲವಾಗಿರುವ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ತಮ್ಮ ಕಾರ್ಯಕ್ಕೆ ತೆರಳುತ್ತಾರೆ. ಕೋವಿಡ್ ನಿಯಮದಂತೆ ಬಸ್ ಓಡಾಟ ಸ್ಥಗಿತಗೊಂಡ ಬಳಿಕ ಇದೀಗ ಬಸ್ ಓಡಾಟಕ್ಕೆ ಅನುಮತಿಯಿದ್ದಾಗ್ಯೂ ಖಾಸಗಿ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಡೀಸೆಲ್ ಬೆಲೆಯೇರಿಕೆ, ಬಸ್‌ನಲ್ಲಿ ಶೇ. 50ರಷ್ಟು ಪ್ರಯಾಣಿಕರಿಗೆ ಸರಕಾರ ಅವಕಾಶ ಕಲ್ಪಿಸಿದ ಪರಿಣಾಮ ಖಾಸಗಿ ಬಸ್ ಮಾಲಕರು ಬಸ್ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ. ಪ್ರಸ್ತುತ ಕಾರ್ಕಳದಿಂದ ಉಡುಪಿಗೆ ಗಂಟೆಗೊಂದರಂತೆ ಸರಕಾರಿ ಬಸ್ ಸಂಚರಿಸುತ್ತಿದ್ದು, ಉಳಿದ ಬಸ್‌ಗಳು ಕಾರ್ಯಾರಂಭ ಮಾಡಿಲ್ಲ.
ಖಾಸಗಿ ಬಸ್ ಓಡಿಸುವುದಾದರೂ ಹೇಗೆ ?
ಒಂದು ಖಾಸಗಿ ಬಸ್ ವರ್ಷಕ್ಕೆ 2 ಲಕ್ಷ ರೂ. ತೆರಿಗೆ ಪಾವತಿ ಸರಕಾರಕ್ಕೆ ಮಾಡಬೇಕಾಗುವುದು. ಇದರೊಂದಿಗೆ ಬಸ್ ಮಾಲಕರು ಇನ್ಸೂರನ್ಸ್ 1 ಲಕ್ಷ ರೂ., ಚಾಲಕ, ನಿರ್ವಾಹಕರ ಸಂಬಳ ನೀಡಬೇಕಾಗುವುದು. ಇದನ್ನೆಲ್ಲ ಲೆಕ್ಕಾಚಾರ ಹಾಕಿದಲ್ಲಿ ಬಸ್ ಮಾಲಕರು ತಮ್ಮ ಕೈಯಿಂದಲೇ ಹಣ ಖರ್ಚು ಮಾಡಿ ಬಸ್ ಓಡಾಟ ನಡೆಸಬೇಕಾಗಿದೆ. ಸರಕಾರದ ನಿಯಮದಂತೆ ಖಾಸಗಿ ಬಸ್ ಮಾಲಕರು ಬಸ್ ಓಡಿಸುವುದು ಕಷ್ಟಸಾಧ್ಯ. ಕಾರ್ಕಳದಿಂದ ಮಂಗಳೂರಿಗೆ ಖಾಸಗಿ ಬಸ್ ದರ 64 ರೂ. ಇದೆ. 20 ಪ್ರಯಾಣಿಕರನ್ನು ತುಂಬಿಕೊಂಡು ಹೋದಲ್ಲಿ 1,200 ರೂ. ಕಲೆಕ್ಷನ್ ಆಗುವುದು. ಬಸ್ ನಲ್ಲಿ ಒಂದು ಲೀಟರ್‌ಗೆ 4 ಕಿ.ಮೀ. ಮೈಲೇಜ್ ದೊರೆಯುವುದು. ಒಮ್ಮೆ ಮಂಗಳೂರು ಹೋಗಿ ಬರಲು 30 ಲೀಟರ್ ಪೆಟ್ರೋಲ್ ಬೇಕಾಗುವುದು. ಹೀಗಾದಲ್ಲಿ ಖಾಸಗಿ ಬಸ್ ಓಡಾಟ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಕಾರ್ಕಳ ಬಸ್ ಏಜೆಂಟ್ ಬಳಗದ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮ್ಮದ್.

ಶೇ. 20 ದರ ಏರಿಕೆ ಪ್ರಸ್ತಾಪ

ಡಿಸೆಲ್ ದರ ಏರಿಕೆ ಪರಿಣಾಮ ಖಾಸಗಿ ಬಸ್ ದರವನ್ನು ಶೇ. 20ರಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಬಸ್ ಮಾಲಕರು ಸರಕಾರದ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸ್ ದರ ಏರಿಕೆಯಾದಲ್ಲಿ ಖಾಸಗಿ ಬಸ್ ಪ್ರಯಾಣ ದುಬಾರಿಯಾಗಲಿದ್ದು, ಅದರ ಬರೆ ಪ್ರಯಾಣಿಕರ ಮೇಲೆ ಬೀಳಲಿದೆ.
ಜು. 1ರಿಂದ ಖಾಸಗಿ ಬಸ್ ಕಾರ್ಯಾಚರಣೆ ಆರಂಭ
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೂ. 25ರಂದು ಖಾಸಗಿ ಬಸ್ ಮಾಲಕರೊಂದಿಗೆ ಸಭೆ ನಡೆಸಲಾಗಿದ್ದು, ಜುಲೈ 1ರಿಂದ ಖಾಸಗಿ ಬಸ್ ಕಾರ್ಯಾಚರಣೆ ಮಾಡುವಂತೆ ನಿರ್ಧರಿಸಲಾಗಿದೆ.


























