ಮಿಯ್ಯಾರು- ಕೋವಿಡ್‌ ಪರೀಕ್ಷಾ ಕ್ಯಾಂಪ್‌ಗೆ ಭೇಟಿ ನೀಡಿದ ಡಿಸಿ

ಕಾರ್ಕಳ : ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡಾಜೆ ಶಾಲೆಯಲ್ಲಿ ನಡೆಯುತ್ತಿದ್ದ ಕೊರೋನಾ ಪರೀಕ್ಷಾ ಕ್ಯಾಂಪ್ ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಬುಧವಾರ ಭೇಟಿ ನೀಡಿದರು. ಈ ವೇಳೆ ಮಿಯ್ಯಾರು ಗ್ರಾ.ಪಂ. ಪಿಡಿಓ ಮಹಾದೇವ ಎಸ್‌.ಎನ್., ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಕೋವಿಡ್‌ ಪರೀಕ್ಷೆ ಏರ್ಪಡಿಸಲಾಗುತ್ತಿದ್ದು, ಗ್ರಾ.ಪಂ. ಅಧ್ಯಕ್ಷರ ಹಾಗೂ ಸರ್ವ ಸದಸ್ಯರ ಮುತುವರ್ಜಿಯಿಂದಾಗಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು, ತಹಶೀಲ್ದಾರ್‌ ಪುರಂದರ ಹೆಗ್ಡೆ, ಇಒ ಶಶಿಧರ್‌ ಜಿ.ಎಸ್.‌, ತಾಲೂಕು ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಗ್ರಾಮ ಪಂಚಾಯತ್‌ ಅಧ್ಯಕ್ಷ ಗಿರೀಶ್‌ ಅಮೀನ್‌, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಾಶ್ರೀ ಅಮೀನ್‌, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಿಯ್ಯಾರು ಕೋವಿಡ್‌ ಕೇರ್‌ ಸೆಂಟರ್‌ ವೀಕ್ಷಣೆ
ಇದಕ್ಕೂ ಮುನ್ನ ಮಿಯ್ಯಾರು ಮೊರಾರ್ಜಿ ವಸತಿ ಶಾಲಾ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿದ ಡಿಸಿಯವರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿದ್ದವರೊಂದಿಗೆ ಆರೋಗ್ಯ ವಿಚಾರಿಸಿ, ಗುಣಮಟ್ಟದ ಊಟೋಪಚಾರ ಸಿಗುತ್ತಿದೆಯೇ ಎಂದು ತಿಳಿದುಕೊಂಡರು. ಬಳಿಕ ಜಿಲ್ಲಾಧಿಕಾರಿಯವರು ಹೋಂ ಐಸೋಲೇಶನ್‌ನಲ್ಲಿರುವವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಆಸ್ಪತ್ರೆಗೆ ಭೇಟಿ
ಅನಂತರ ಡಿಸಿಯವರು ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಆಕ್ಸಿಜನ್‌ ಘಟಕ ಕಾಮಗಾರಿ ವೀಕ್ಷಿಸಿದದು. ಕರ್ತವ್ಯ ನಿರತ ವೈದ್ಯರು, ದಾದಿಯರೊಂದಿಗೆ ಚರ್ಚಿಸಿದರು. ಕಾರ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ಕೋವಿಡ್‌ ಟೆಸ್ಟ್‌, ಆಸ್ಪತ್ರೆ ವ್ಯವಸ್ಥೆ ಕುರಿತು ಇದೇ ಸಂದರ್ಭ ಡಿಸಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಎಫ್‌ಐಆರ್‌ ದಾಖಲಿಸಲು ಸೂಚನೆ
ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟೆಂಪೋವನ್ನು ಕಂಡ ಡಿಸಿಯವರು ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸುವಂತೆ ನಗರ ಠಾಣೆ ಪೊಲೀಸರಿಗೆ ಸೂಚನೆ ನೀಡಿದರು. ಕೋವಿಡ್‌ ನಿಯಮ ಉಲ್ಲಂಘಿಸಿ ತೆರೆದಿದ್ದ ಸಾಲ್ಮರ ಬಳಿಯ ಹಾರ್ಡ್‌ ವೇರ್‌ ಶಾಪ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆಯೂ ಪೊಲೀಸರಿಗೆ ಸೂಚಿಸಿದರು.

















































































error: Content is protected !!
Scroll to Top