ಕಾರ್ಕಳ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಕಾರ್ಕಳ : ಅತಿಥಿ ಉಪನ್ಯಾಸಕರ ನೇಮಕಾತಿ, ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಕಾರ್ಕಳ ತಾಲೂಕು ಕಚೇರಿ ಎದುರುಗಡೆ ಮಂಗಳವಾರ ಪ್ರತಿಭಟನೆ ನಡೆಸಿದರು. ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಶೈಕ್ಷಣಿಕ ಚಟುವಟಿಕೆ ಸಹಜ ಸ್ಥಿತಿಗೆ ಮರಳುತ್ತಿದ್ದರೂ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹ ವ್ಯಕ್ತಪಡಿಸಿದರು.

ವಿದ್ಯಾರ್ಥಿವೇತನ ಬಿಡುಗಡೆಗೊಳಿಸಿ ರಾಜ್ಯದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ತೆರೆದಿದ್ದು, ಉಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಿಲ್ಲದೇ ಪರದಾಡುವಂತಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್‍ಗಳಲ್ಲಿ ವಸತಿ ಕಲ್ಪಿಸಬೇಕು. ಅನೇಕ ಕಾಲೇಜುಗಳಲ್ಲಿ ಹಲವು ವಿಷಯಗಳಿಗೆ ಖಾಯಂ ಉಪನ್ಯಾಸಕರು ಇರುವುದಿಲ್ಲ. ಕೂಡಲೇ ಸರಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕೆಂದು ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್‌ ರೈ ಮಜಕ್ಕಾರ್‌ ಆಗ್ರಹಿಸಿದರು.
ಜಿಲ್ಲಾ ಸಹಸಂಚಾಲಕ್ ಆಶಿಶ್ ಶೆಟ್ಟಿ ಬೋಳ, ತಾಲೂಕು ಸಾಮಾಜಿಕ ಜಾಲತಾಣ ಪ್ರಮುಖ್‌ ಮನೀಶ್ ಕುಲಾಲ್ ಕಾಬೆಟ್ಟು, ಸೂರಜ್, ಪೂಜಾರಿ, ರೋಷನ್ ಶೆಟ್ಟಿ, ಧೀರಜ್ ರಾವ್, ಅಭಿಲಾಷ್, ಮನೋಜ್, ಅಪರ್ಣ ಉಪಸ್ಥಿತರಿದ್ದರು.

ಜಾಥಾ
ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಗೆ ಮಂಜುನಾಥ ಪೈ ಸ್ಮಾರಕ ಪದವಿ ಕಾಲೇಜಿನಿಂದ ಜಾಥಾ ನಡೆಯಿತು. ಜಾಥಾದಲ್ಲಿ ಸುಮಾರು 500 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.

ಮನವಿ
ಪ್ರತಿಭಟನೆ ಬಳಿಕ ತಮ್ಮ ಮನವಿ ಪತ್ರವನ್ನು ವಿದ್ಯಾರ್ಥಿಗಳು ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.























































































































error: Content is protected !!
Scroll to Top