31 ಪಂಚಾಯತ್ ಬಿಜೆಪಿ ತೆಕ್ಕೆಗೆ -2 ಕಾಂಗ್ರೆಸ್, ಕುಚ್ಚೂರು ಪಂ. ಪಕ್ಷೇತರರ ಕೈಗೆ-ಹೆಬ್ರಿ ಸಮಬಲ
362 ಬಿಜೆಪಿ, 102 ಕಾಂಗ್ರೆಸ್ ಬೆಂಬಲಿತರು, 28 ಪಕ್ಷೇತರರು
ಕಾರ್ಕಳ : ಗ್ರಾಮ ಸಂಗ್ರಾಮ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ವಿಧಾನ ಸಭಾ ಕ್ಷೇತ್ರದ 34 ಗ್ರಾ.ಪಂ.ಗಳ ಪೈಕಿ 31 ಪಂಚಾಯತ್ ಬಿಜೆಪಿ ತೆಕ್ಕೆಗೆ ಒಲಿದಿದೆ. ನಾಡ್ಪಾಲು, ಮುದ್ರಾಡಿ, ಹಿರ್ಗಾನ, ಮಾಳ, ಮುಡಾರು, ನಂದಳಿಕೆ, ನಿಟ್ಟೆ, ಇರ್ವತ್ತೂರು, ದುರ್ಗ ಪಂಚಾಯತ್ಗಳಲ್ಲಿ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. 9 ಪಂಚಾಯತ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಗೆದ್ದ ಬಿಜೆಪಿ ಚಾರಾ, ವರಂಗ, ಶಿವಪುರ, ಕಡ್ತಲ, ಮರ್ಣೆ, ಶಿರ್ಲಾಲು, ಕೆರ್ವಾಶೆ, ರೆಂಜಾಳ, ನಲ್ಲೂರು, ಮಿಯ್ಯಾರು, ಸಾಣೂರು, ಕಾಂತಾವರ, ಎರ್ಲಪ್ಪಾಡಿ, ನೀರೆ, ಕುಕ್ಕುಂದೂರು, ಕಲ್ಯಾ, ಬೈಲೂರು, ಪಳ್ಳಿ, ಬೋಳ, ಮುಂಡ್ಕೂರು, ಬೆಳ್ಮಣ್ ಪಂಚಾಯತ್ನಲ್ಲೂ ಬಹುಮತ ಪಡೆದಿದೆ.
ಕುಚ್ಚೂರು ಪಂಚಾಯತ್ನಲ್ಲಿ ಪಕ್ಷೇತರರದ್ದೇ ಪಾರುಪತ್ಯವಾಗಿದ್ದು, ಹೆಬ್ರಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 8ರ ಸಮಬಲ ಹೊಂದಿದೆ. ಚಾರಾದಲ್ಲಿ ಬಿಜೆಪಿ ಬೆಂಬಲಿತ 7 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ 6 ಮಂದಿ ಆಯ್ಕೆಯಾಗಿರುತ್ತಾರೆ. ಕಾರ್ಕಳ-ಹೆಬ್ರಿ ಉಭಯ ತಾಲೂಕಿನ 34 ಪಂಚಾಯತ್ನಲ್ಲಿ 362 ಬಿಜೆಪಿ, 102 ಕಾಂಗ್ರೆಸ್ ಬೆಂಬಲಿತರು, 28 ಪಕ್ಷೇತರರು ಜಯದ ನಗೆ ಬೀರಿದ್ದಾರೆ.




























































