Tuesday, July 5, 2022
spot_img
Homeಸುದ್ದಿʼಸೋತರೆ ಮಾಡುವ ಕೆಲಸʼಗಳಿಂದಲೇ ಪ್ರಚಾರದಲ್ಲಿದ್ದ ಮಹಿಳಾ ಅಭ್ಯರ್ಥಿಗೆ ಹೀನಾಯ ಸೋಲು

ʼಸೋತರೆ ಮಾಡುವ ಕೆಲಸʼಗಳಿಂದಲೇ ಪ್ರಚಾರದಲ್ಲಿದ್ದ ಮಹಿಳಾ ಅಭ್ಯರ್ಥಿಗೆ ಹೀನಾಯ ಸೋಲು

ಬೆಂಗಳೂರು: ಗೆದ್ದರೆ ಏನು ಮಾಡುತ್ತೇನೆ, ಸೋತರೆ ಏನು ಮಾಡುತ್ತೇನೆ ಎಂಬುದನ್ನು ಚುನಾವಣಾ ಪ್ರಚಾರ ಕರಪತ್ರದಲ್ಲಿ ತಿಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಅಭ್ಯರ್ಥಿ ಗಂಗಮ್ಮ ಎಚ್. ಹೀನಾಯವಾಗಿ ಸೋತಿದ್ದಾರೆ.

ಹೆಣ್ಣೂರು ಗ್ರಾಮ ಪಂಚಾಯತ್ ನ 7-ಕಲ್ಕೆರೆ ಕ್ಷೇತ್ರದಿಂದ ಗಂಗಮ್ಮ ಸ್ಪರ್ಧಿಸಿದ್ದರು. ಅವರಿಗೆ ಚಪ್ಪಲಿ ಚಿಹ್ನೆ ನೀಡಲಾಗಿತ್ತು. ದೊಡ್ಡಗುಣಿ ಕ್ಷೇತ್ರದಿಂದಲೂ ಅವರು ಸ್ಪರ್ಧಿಸಿದ್ದರು. ಅಲ್ಲೂ ಅವರು 6 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾರೆ. ಡಿ.22 ರಂದು ಈ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಗೆದ್ದರೆ ಮಾಡುವ ಕೆಲವು ಅಭಿವೃದ್ಧಿ ಕೆಲಸಗಳನ್ನು ಕರಪತ್ರದಲ್ಲಿ ಪಟ್ಟಿ ಮಾಡಿದ್ದರೆ, ಇದೇ ವೇಳೆ ಸೋತರೆ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇನೆ, ಸುಳ್ಳು ಮಾಹಿತಿ ನೀಡಿ ಸೌಲಭ್ಯ ಪಡೆಯುತ್ತಿರುವವರ ಸೌಲಭ್ಯಕ್ಕೆ ಕತ್ತರಿ ಹಾಕುತ್ತೇನೆ ಮುಂತಾದ ಕೆಲಸ ಮಾಡುವುದಾಗಿ ಪಟ್ಟಿ ಮಾಡಿದ್ದರು. ಈ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಮತದಾರ ಪ್ರಭು ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ.

ವೈರಲ್ ಆಗಿತ್ತು ಪ್ರಚಾರದ ಕರಪತ್ರ
ಗಂಗಮ್ಮ ತಾವು ಗೆದ್ದರೆ ಮತ್ತು ಸೋತರೆ ಮಾಡುವ ಕೆಲಸಗಳ ಪಟ್ಟಿಯನ್ನು ಅವರು ಕರಪತ್ರದಲ್ಲಿ ಮುದ್ರಿಸಿದ್ದರು. ಗೆದ್ದರೆ ಕರೇತಿಮ್ಮರಾಯಸ್ವಾಮಿ ದೇವಸ್ಥಾನದ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಮಾಡುವೆ, ಅರಳೀಕಟ್ಟೆ ಕಟ್ಟಿಸುವೆ, ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಕಲ್‌ವರೆಗೆ ರಸ್ತೆ ಮಾಡಿಸುವೆ, ಊರ ಮುಂದೆ ಮಳೆ ನೀರು ರಸ್ತೆಗೆ ಹರಿಯದೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಬಯ್ಯನ ಗದ್ದೆವರೆಗೆ ಸಿಸಿ ಚರಂಡಿ ಮಾಡಿಸುವೆ ಎಂದಿದ್ದರು.

ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುವೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡೆದಿರುವ 40 ಕುಟುಂಬಗಳ ಮಾಸಾಶನ ಹಣ ನಿಲ್ಲಿಸುವೆ, ಸರ್ವೆ ನಂ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವೆ, ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್‌ಲೀಸ್ಟ್‌ನಂತೆ ತೆರವುಗೊಳಿಸಲು ಹೋರಾಟ ಮಾಡಲಾಗುವುದು ಎಂದು ಕರಪತ್ರದಲ್ಲಿ ತಿಳಿಸಿದ್ದರು.

ಗಂಗಮ್ಮ ಗೆಲ್ಲುವುದಕ್ಕಿಂತ ಸೋತರೆ ಹೆಚ್ಚು ಅನುಕೂಲ ಎಂದು ಜಾಲತಾಣಗಳಲ್ಲಿ ಚರ್ಚೆಯೂ ನಡೆದಿತ್ತು. ದೊಡ್ಡಬಳ್ಳಾಪುರದ ವಕೀಲ ಟಿ.ಕೆ.ಹನುಮಂತರಾಜ್, ಗಂಗಮ್ಮ ಅವರು ಕರಪತ್ರ ಗ್ರಾಮದ ಮತದಾರರಲ್ಲಿ ಭಯ ಹುಟ್ಟಿಸಿ ಮತ ಪಡೆಯುವ ಉದ್ದೇಶ ಹೊಂದಿದೆ. ಇದು ಕಾನೂನು ಬಾಹಿರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ, ತುಮಕೂರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು.---

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!