ಕಾರ್ಕಳದ ವಿವಿಧೆಡೆ ‘ಸ್ವರ್ಣಾರಾಧನಾ’ ನದೀ ಪಾತ್ರದ ಸ್ವಚ್ಛತಾ ಅಭಿಯಾನ ಸಂಪನ್ನ

ಕಾರ್ಕಳ, ನ. 29 : ಸ್ವರ್ಣಾ ನದಿಯನ್ನು ಸ್ವಚ್ಛಗೊಳಿಸುವ ಸ್ವರ್ಣರಾಧಾನಾ ಅಭಿಯಾನ ಇಂದು ಕಾರ್ಕಳದಲ್ಲಿ ನಡೆಯಿತು. ಜೋಕುಲುಬೆಟ್ಟು ಸಮೀಪ ಸ್ವಚ್ಛತೆಯನ್ನು ಕಾರ್ಕಳ ಸ್ವರ್ಣಾರಾಧನಾ ತಂಡವು ಪೂರ್ಣಗೊಳಿಸಿದೆ. ಹಾಗೆಯೇ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಚತಾ ಬ್ರಿಗೇಡ್, ರೋವರ್ಸ್ ಮತ್ತು ರೇಂಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕಾರ್ಕಳ ರೋಟರಾಕ್ಟ್, ರೋಟರಿ ಆನ್ಸ್ ಕಾರ್ಕಳ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ನದೀ ಪಾತ್ರದ ಸ್ವಚ್ಛತೆಯನ್ನು ನಡೆಸಲಾಯಿತು.
ಉಡುಪಿ ಜಿಲ್ಲೆಯ ಅತಿ ಸುಂದರವಾದ ಮತ್ತು ಕೃಷಿ ಹಾಗೂ ಕುಡಿಯುವ ನೀರಿಗೆ ಆಧಾರವಾಗಿರುವ ಸ್ವರ್ಣಾ ನದಿಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸುವ ಅಭಿಯಾನವೇ ಸ್ವರ್ಣಾರಾಧನಾ. ಈ ನದಿಯ ಉಗಮ ಆಗಿರುವುದು ಕಾರ್ಕಳದಲ್ಲಿ.ಹೀಗಾಗಿ ಉಗಮ ಸ್ಥಾನದಿಂದಲೇ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಸ್ವಚ್ಛಗೊಂಡ ನದಿ

ಮೊದಲ ಹಂತದಲ್ಲಿ ಸ್ವರ್ಣಾ ನದಿಯು ಹರಿಯುವ ಪಾತ್ರದ ಐದು ಗ್ರಾಮಗಳನ್ನು ಸ್ಥಳೀಯ ಸಂಘಟನೆಗಳ ಮೂಲಕ ದತ್ತು ಸ್ವೀಕಾರ ಮಾಡಲಾಗಿದ್ದು ಮೊದಲ ಹಂತದಲ್ಲಿ ನದೀ ತೀರದ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಹೆಕ್ಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆರ್ಮುಂಡೆ, ಮುಂಡ್ಲಿ , ಮಾಳ, ತೆಳ್ಳಾರು, ಮುಡಾರು ಈ ಐದು ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ವರ್ಣಾ ನದಿಯ ಪಾತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮೊದಲ ಹೆಜ್ಜೆಯನ್ನು ಮಾಡುವುದಾಗಿ ನಿರ್ಧರಿಸಲಾಗಿದೆ.
ಉಡುಪಿಯ ಜಲತಜ್ಞರಾದ ಡಾ.ನಾರಾಯಣ ಶೆಣೈ ಅವರ ನೇತೃತ್ವದಲ್ಲಿ ಆರಂಭ ಆಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಡಾರು ಸಂಘಟನೆ, ಯುವಸ್ಪಂದನ ಗೆಳೆಯರ ಬಳಗ ಮುಂಡ್ಲಿ, ಹಸಿರೇ ಉಸಿರು ಸಂಘಟನೆ ತೆಳ್ಳಾರು, ಯೂತ್ ಬಿಲ್ಲವ ಕಾರ್ಕಳ ಮೊದಲಾದ ಸಂಘಟನೆಗಳು ಕೈ ಜೋಡಿಸಿವೆ. ಇಂದು ಮುಂಜಾನೆ ಸೂರ್ಯೋದಯಕ್ಕೆ ಮುಂಚೆಯೇ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಲಾಗಿತ್ತು. ಒಟ್ಟು ಸುಮಾರು 70 ಸದಸ್ಯರು ಭಾಗವಹಿಸಿದರು.

















































































error: Content is protected !!
Scroll to Top