“ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ
ಬಿಡುವಿರದು ಬಣಗು ಚಿಂತೆಗೆ, ಬುತ್ತಿಯ ಹಂಗಿರದು
ಕಡಿದಲ್ಲವರ್ಗೆ ಬಾಳ್ ಮಂಕುತಿಮ್ಮ.
ಮರದ ಕೆಲಸ ಮಾಡುವ ಬಡಗಿಗೆ,ಬೇಸಾಯ ಮಾಡುವ ಕೃಷಿಕರಿಗೆ,ವಿವಿಧ ಕುಶಲ ಕಲೆಯ ಕಾರ್ಮಿಕರಿಗೆ ಯೋಗ ವಿದ್ಯೆ ಗೊತ್ತಿಲ್ಲ.ಆದರೆ ಅವರ ಮನಸ್ಸೆಲ್ಲಾ ತಾವು ಮಾಡುವ ಕೆಲಸದ ಮೇಲೆ ಕೇಂದ್ರಿಕೃತವಾಗಿರುತ್ತದೆ. ವ್ಯರ್ಥವಾದ ಒಣ ಹರಟೆಗೆ ಅವರಲ್ಲಿ ಸಮಯವಿಲ್ಲ. ಊಟದ ಚಿಂತೆಯು ಅವರಿಗಿರುವುದಿಲ್ಲ.ಶ್ರದ್ಧೆಯಿಂದ ತಮ್ಮ ತಮ್ಮ ಕೆಲಸ ಮಾಡುವ ಇವರಿಗೆ ಜೀವನವು ಕಷ್ಟವೆನಿಸುವುದಿಲ್ಲ ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
“ಶ್ರದ್ಧಾವಾನ್ ಲಭತೇ ಜ್ಞಾನಂ” ಎಂಬಂತೆ ಶ್ರದ್ಧೆ ಯಾರಲ್ಲಿ ಇರುತ್ತದೋ ಅಂತವರಿಗೆ ಜ್ಞಾನ ಪ್ರಾಪ್ತವಾಗುತ್ತದೆ.”ಯೋಗಃ ಚಿತ್ತವೃತ್ತಿ ನಿರೋಧಃ ” ಅಂದರೆ ಮನಸ್ಸಿನ ಸಹಜವಾದ ಚಂಚಲತೆಯನ್ನು ಹೋಗಲಾಡಿಸಿ ಒಂದೆಡೆ ಕೇಂದ್ರೀಕರಿಸಲು ಯೋಗ ವಿದ್ಯೆ ಸಹಾಯ ಮಾಡುತ್ತದೆ ಎಂದು.ಆದರೆ ಕೆಲಸ ಮಾಡುವ ಎಲ್ಲರೂ ಏಕಾಗ್ರತೆಯನ್ನು ಸಾಧಿಸಲು ಯೋಗ ವಿದ್ಯೆಯನ್ನು ಕಲಿಯಬೇಕು ಎಂದೇನಿಲ್ಲ,ನಾವು ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದರೆ ಎಲ್ಲಾ ಶಕ್ತಿಗಳು ನಮಗೆ ಬರುತ್ತವೆ.ಇದಕ್ಕೆ ಯೋಗವನ್ನು ಮಾಡದೆ ಮನಸ್ಸಿಟ್ಟು ಕೆಲಸ ಮಾಡುವ ಕಾಯಕ ಯೋಗಿಗಳಾದ ಬಡಗಿಗಳು,ಕೃಷಿಕರು ,ಕುಶಲ ಕರ್ಮಿಗಳು ಪ್ರತ್ಯಕ್ಷ ಸಾಕ್ಷಿಯಾಗುತ್ತಾರೆ.


ಯಾವಾಗಲೂ “ನನಗೆ ಸಮಯವಿಲ್ಲ” ಎನ್ನುವ ನಾವು ಜೀವನದ ಬಹಳಷ್ಟು ಸಮಯವನ್ನು ವ್ಯರ್ಥವಾದ ಮಾತುಕತೆ ಅಂದರೆ ಹಾಳು ಹರಟೆಯಲ್ಲಿಯೇ ಕಳೆಯುತ್ತೇವೆ.ಬದುಕಿನ ಬವಣೆಗಳ ಬಗ್ಗೆ ಮಾತನಾಡುತ್ತ ಜೀವನ ಬಹಳ ಕಷ್ಟ ಎನ್ನುತ್ತೇವೆ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆಯಂತೆ ಮನಸ್ಸಿಟ್ಟು ದುಡಿಯುವವರಿಗೆ ,ಶ್ರಮ ಪಡುವವರಿಗೆ ಬದುಕು ಭಾರವಾಗದೆ ಹಗುರಾಗಿರುತ್ತದೆ.”ಇಂದಿನ ದಿನವನ್ನು ನಾಳಿನ ಚಿಂತೆಯಲ್ಲಿ ಹಾಳು ಮಾಡಿದೆ ಮನಸ್ಸಿಟ್ಟ ಕೆಲಸ ಮಾಡಿದರೆ ಅಸಾಧ್ಯವಾದುದನ್ನು ಸಾಧಿಸಬಹುದು “ಎಂದು ರಾಬರ್ಟ್ ನತನ್ ಹೇಳಿದ್ದಾನೆ.ಕಾಯಕ ನಿಷ್ಠೆಯನ್ನು ಸಾರುವ ಡಿ.ವಿ.ಜಿ. ಯವರ ಈ ಕಗ್ಗದ ಸಂದೇಶವನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗಲೆ ಜೀವನ ಸಾರ್ಥಕವಾಗುವುದಲ್ಲವೆ?
” ಕಡಿಮೆ ತಿಳುಳಿಕೆಯುವುಳ್ಳವರೇ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಾರೆ.ಜಾಸ್ತಿ ತಿಳುವಳಿಕೆಯುಳ್ಳವರು ಹೆಚ್ಚಾಗಿ ಗೊಂದಲದಲ್ಲೇ ಇರುತ್ತಾರೆ”
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರು





























































