ಕಾರ್ಕಳದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ ಕುಮಾರ್‌ ಕಟೀಲ್‌

ಕಾರ್ಕಳದಲ್ಲಿ ಹುಟ್ಟಿ ಬೆಳೆದ ಮತ್ತು ರಕ್ತದಲ್ಲಿ ಕ್ರೀಡೆಯನ್ನು ಬಳುವಳಿಯಾಗಿ ಪಡೆದುಕೊಂಡು ಹೆಸರು ಮಾಡಿದ ರೋಹಿತ್‌ ಕುಮಾರ್‌ ಕಟೀಲ್‌ ಅವರು ಕಾರ್ಕಳದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು. 1986ರಲ್ಲಿ ಗ್ರೀಸ್‌ ದೇಶದ ಅಥೆನ್ಸ್‌ನಲ್ಲಿ  ನಡೆದ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದವರು ಮತ್ತು ಆ ಸಾಧನೆ ಮಾಡಿದ ಮೊದಲ ಭಾರತೀಯ. ಹೈಜಂಪ್ ಅವರ ಸ್ಪರ್ಧಾ ಕ್ಷೇತ್ರವಾಗಿತ್ತು. ಇಂದು ವಿಶ್ವ ಕ್ರೀಡಾ ದಿನದ ಅಂಗವಾಗಿ newskarkala.com ಅವರನ್ನು  ಸಂದರ್ಶಿಸಿತು.

ಬಾಲ್ಯ ಮತ್ತು ಕೌಟುಂಬಿಕ ಹಿನ್ನೆಲೆ

ನನ್ನ ಅಜ್ಜ ಕೋಟಿ ಶೆಟ್ಟಿಯವರು ಕಟೀಲು ದೇವಸ್ಥಾನದ ಎರಡನೇ ಮೊಕ್ತೇಸರರು. ನನ್ನ ತಂದೆ ಕಟೀಲು ಬಾಲಕೃಷ್ಣ ಶೆಟ್ಟಿಯವರು ಕಾಫಿ ಪ್ಲಾಂಟರ್‌ ಆಗಿದ್ದರು ಮತ್ತು ಕ್ರೀಡಾಪಟು ಆಗಿದ್ದರು. ನನ್ನ ಅಮ್ಮ ಮಜಲಬೆಟ್ಟು ಬೀಡು ಶಾಂಭವಿ ಶೆಟ್ಟಿಯವರು ನನ್ನ ಬದುಕಿಗೆ ತುಂಬ ಸ್ಫೂರ್ತಿ ನೀಡಿದವರು. ನನ್ನ ಅಣ್ಣ ವಿವೇಕ್‌ ಶೆಟ್ಟಿ ನನ್ನ ಬಾಲ್ಯದ ಕೋಚ್.‌ ಕಾರ್ಕಳದ ಪೆರ್ವಾಜೆ ಶಾಲೆ, ಭುವನೇಂದ್ರ ಪ್ರೌಢ ಶಾಲೆ ಮತ್ತು ಶ್ರೀ ಭುವನೇಂದ್ರ ಕಾಲೇಜು ನಾನು ಓದಿದ ವಿದ್ಯಾಸಂಸ್ಥೆಗಳು.

ಕ್ರೀಡಾ ಜೀವನದ ಆರಂಭ

ಕಾರ್ಕಳ ಭುವನೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ ತಾಲೂಕು ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಬಂದಿತ್ತು. ಮುಂದಿನ ವರ್ಷ ಅದನ್ನು ಸವಾಲಾಗಿ ಸ್ವೀಕರಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದೆನು. ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ 1984ರಿಂದ ಸತತ ಐದು ವರ್ಷ ಮಂಗಳೂರು ವಿವಿ ಮಟ್ಟದಲ್ಲಿ ಚಿನ್ನದ ಪದಕ ಮತ್ತು ವಿವಿ ದಾಖಲೆ ಮಾಡಲು ನನಗೆ ಸಾಧ್ಯವಾಯಿತು.

1987ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ನಾನು ಹಾರಿದ್ದ 2.03 ಮೀಟರ್‌ ಸತತ 24 ವರ್ಷ ಅಬಾಧಿತವಾಗಿ ಉಳಿದಿತ್ತು. ಅಖಿಲ ಭಾರತ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ನನಗೆ ದೊರೆತಿತ್ತು. ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸತತ 8 ವರ್ಷ ಚಿನ್ನದ ಪದಕ , 4 ವರ್ಷ ರಾಜ್ಯ ಮಟ್ಟದ ದಾಖಲೆ (1.99 ಮೀಟರ್)‌, ಅಂಡರ್‌  19 ಅಖಿಲ ಭಾರತ ಕ್ರೀಡಾಕೂಟದಲ್ಲಿ  ಚಿನ್ನದ ಪದಕ ಇವೆಲ್ಲವೂ ನನ್ನ ಮೂಲಕ ಆದ ಸಾಧನೆಗಳು.

ಅಂತಾರಾಷ್ಟ್ರೀಯ ಕ್ರೀಡೆಯ ಹೆಜ್ಜೆಗಳು  

1986ರಲ್ಲಿ ಗ್ರೀಸ್‌ ದೇಶದ ಅಥೆನ್ಸ್‌ನಲ್ಲಿ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಕೂಟವು ನಡೆಯಿತು. ಇದರಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವು ನನಗೆ ದೊರೆಯಿತು. ಈ ಸಾಧನೆ ಮಾಡಿದ ಮೊದಲ ಭಾರತೀಯ ನಾನು. ವಿಶ್ವ ಮಟ್ಟದಲ್ಲಿ 15 ನೇ ಸ್ಥಾನ ಮತ್ತು ಏಷ್ಯಾ ಮಟ್ಟದಲ್ಲಿ 2 ನೇ ಸ್ಥಾನ  ನನಗೆ  ಹೈಜಂಪ್‌ನಲ್ಲಿ ದೊರೆಯಿತು. ಇದು ನನ್ನ ಜೀವನದ ಸ್ಮರಣೀಯವಾದ ಕ್ಷಣ.

ಇತರ ಕ್ರೀಡೆಗಳು

ಕಾರ್ಕಳ ಭುವನೇಂದ್ರ ಕಾಲೇಜಿನ ವಾಲಿಬಾಲ್‌  ತಂಡದ ಕ್ಯಾಪ್ಟನ್‌ ಆಗಿ ಸತತವಾಗಿ ವಿವಿ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯಲು ನಮಗೆ ಸಾಧ್ಯವಾಯಿತು. ದಕ್ಷಿಣ ಭಾರತ ಮಟ್ಟದಲ್ಲಿ ಭಾರತೀಯ ಜೀವ ವಿಮಾ ನಿಗಮವನ್ನು ಪ್ರತಿನಿಧಿಸಿ ಹಲವಾರು ಬಾರಿ ಚಾಂಪ್ಯನ್‌ಶಿಪ್‌ ಪಡೆದಿದ್ದೇವೆ…

ಇತರ ಆಸಕ್ತಿಗಳು

ಕಲಾತ್ಮಕ ಚಿತ್ರವಾದ ಬಣ್ಣದ ಕೊಡೆಯಲ್ಲಿ  ಪ್ರಧಾನ ಪಾತ್ರ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಬ್ರೇಕಿಂಗ್‌ ನ್ಯೂಸ್‌ ಸಿನೇಮಾದಲ್ಲಿ ಎಸ್‌ಐ ಪಾತ್ರ ನನಗೆ ಹೆಸರು ತಂದವು. ದೂರದರ್ಶನದಲ್ಲಿ ದೀರ್ಘಾವಧಿಗೆ ಪ್ರಸಾರವಾದ ಕೋಟಿ ಚೆನ್ನಯ ಧಾರಾವಾಹಿಯಲ್ಲಿ ಚೆನ್ನಯನ ಪಾತ್ರದ ಮೂಲಕ ಜನ ನನ್ನ ಪ್ರತಿಭೆಯನ್ನು ಗುರುತಿಸಿದರು. ದೂರದರ್ಶನದಲ್ಲಿ ಪ್ರಸಾರವಾದ ಇನ್ನೊಂದು ಧಾರಾವಾಹಿ ಶ್ರೀದೇವಿ ಚರಿತ್ರೆಯಲ್ಲಿ ಪರಶುರಾಮನ ಪಾತ್ರ ಮುಂದೆ ಬರಲಿರುವ ಕನ್ನಡ, ತುಳು, ಮರಾಠಿ ಭಾಷೆಯ ಅಗೊಳಿ ಮಂಜಣ್ಣ ಸಿನೇಮಾದಲ್ಲಿ ಶೀರ್ಷಿಕೆಯ ಪಾತ್ರ ಈಗಲೇ ತುಂಬ ನಿರೀಕ್ಷೆಯನ್ನು ಹುಟ್ಟಿಸಿದೆ.

ಕುಟುಂಬದ ಬೆಂಬಲ

ನನ್ನ ತಂದೆ, ತಾಯಿ ಮತ್ತು ಅಣ್ಣಂದಿರು ನನ್ನ ಕ್ರೀಡಾ ಜೀವನಕ್ಕೆ ಸ್ಫೂರ್ತಿ ಕೊಟ್ಟವರು. ನನ್ನ ಧರ್ಮಪತ್ನಿ ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ ಆಗಿರುವ ಅಪ್ಸರಾ ಕಟೀಲ್‌ ಕೂಡ ಭಾರತವನ್ನು ಪ್ರತಿನಿಧಿಸಿದವರು. ಮಗ ಏಕಲವ್ಯ  ಆರ್‌. ಕಟೀಲ್‌ ಫುಟ್‌ಬಾಲಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾನೆ. ಇದರ ಜೊತೆಗೆ ನನಗೆ ಪ್ರೇರಣೆ ಕೊಟ್ಟ ಎಲ್ಲ ದೈಹಿಕ ಶಿಕ್ಷಕರು, ಕೋಚ್‌ ಮತ್ತು ತರಬೇತುದಾರರಿಗೆ ನಾನು ಋಣಿಯಾಗಿದ್ದೇನೆ. ಕಾರ್ಕಳದಲ್ಲಿ ಸುಸಜ್ಜಿತವಾದ ಹೊಟೀಲ್‌ ಕಟೀಲ್‌ ಇಂಟರ್‌ ನ್ಯಾಶನಲ್‌ ಉದ್ಯಮವನ್ನು ಕಳೆದ ಹಲವು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದೇನೆ.

ಕ್ರೀಡಾಪಟುಗಳಿಗೆ ಸಂದೇಶ

ಕ್ರೀಡೆ ನಿಮಗೆ  fashion ಆಗುವುದು ಬೇಡ. ಅದನ್ನು passion ಮಾಡಿಕೊಂಡು ಬದ್ಧತೆಯಿಂದ ಕೆಲಸ ಮಾಡಿದರೆ ಯಾರೂ ಕೂಡ ಉತ್ತಮ ಕ್ರೀಡಾಪಟು ಆಗಬಹುದು. ಕ್ರೀಡೆಯು ನಮ್ಮಿಂದ ಸಮರ್ಪಣಾ ಮನೋಭಾವವನ್ನು ಬಯಸುತ್ತದೆ.  

































































































error: Content is protected !!
Scroll to Top